

ವಿಜಯವಾಣಿ ಸುದ್ದಿಜಾಲ ಧಾರವಾಡ
ಪ್ರತಿ ಸಮಸ್ಯೆಗೂ ಶಿಕ್ಷಣದಿಂದ ಪರಿಹಾರ ನೀಡಲು ಸಾಧ್ಯ. ಸಮಾಜದವರು ಮೂಲ ವೃತ್ತಿ ಜತೆಗೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಸರ್ಕಾರದ ಸೌಲಭ್ಯ ಪಡೆದು ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ ಹೇಳಿದರು.
ನಗರದ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಶಿವಶರಣ ಶ್ರೀ ನುಲಿಯ ಚಂದಯ್ಯ ಜಯಂತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ನುಲಿಯ ಚಂದಯ್ಯನವರು ಕಾಯಕ ಶರಣ ಬಸವಣ್ಣನವರ ಜತೆಗೆ ಸೇರಿ ಸಮಾಜದಲ್ಲಿರುವ ತಮ್ಮ ಕಸುಬುಗಳ ಮೂಲಕ ಎಲ್ಲರಂತೆ ದುಡಿದು ಜೀವನ ನಡೆಸಿಕೊಂಡು ಬದುಕುವಂತೆ ಸಮಾಜಕ್ಕೆ ಪ್ರೇರಣೆ ನೀಡಿದರು. ಚಂದ್ಯಯನವರು ನಾರು, ಹುಲ್ಲು ತೆಗೆದುಕೊಂಡು ಬಂದು ಹಗ್ಗ ನೂಲುತ್ತಿದ್ದರು. ಸಮಾಜಕ್ಕೆ ಅನೇಕ ರೀತಿ ಸೇವೆ ಸಲ್ಲಿಸಿದ್ದಾರೆ. ಇವರು ವಚನಗಳನ್ನು ಬರೆಯುವ ಮೂಲಕ ಸಮಾಜಕ್ಕೆ ಮೌಲ್ಯಯುತ ಸಂದೇಶ ನೀಡಿದ್ದಾರೆ ಎಂದರು.
ಮೇಯರ್ ರಾಮಪ್ಪ ಬಡಿಗೇರ ಮಾತನಾಡಿ, ನುಲಿಯ ಚಂದಯ್ಯನವರು ಒಂದೇ ಸಮಾಜಕ್ಕೆ ಸೀಮಿತವಲ್ಲ. ನಾಡಿನ ಎಲ್ಲ ಧರ್ಮದವರಿಗೂ ಅನ್ವಯಿಸುತ್ತಾರೆ. ತಮ್ಮ ಕಾಯಕದಿಂದ ಬಂದ ಹಣದಿಂದ ಸಮಾಜದ ಜನರಿಗೆ ದಾಸೋಹ ಮಾಡುತ್ತಿದ್ದರು ಎಂದರು.
ಡಾ. ಉಮಾದೇವಿ ಜಡರಾಮಕುಂಟಿ ಉಪನ್ಯಾಸ ನೀಡಿದರು. ಯಾದವಾಡ ಗ್ರಾಮದ ಆನಂದ ಧಾಮ ಸಿದ್ಧಾರೂಢ ಮಠದ ಡಾ. ಆನಂದ ಮಹಾಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಸಮಾಜದ ಹನುಮಂತಪ್ಪ ಕೊರವರ ಅಧ್ಯಕ್ಷತೆ ವಹಿಸಿದ್ದರು.
ಉಪಮೇಯರ್ ದುರ್ಗಮ್ಮ ಬಿಜವಾಡ, ವಕೀಲ ಅರುಣ ಜೋಶಿ, ಸಮಾಜದ ಮುಖಂಡರಾದ ನಾರಾಯಣ ಭಜಂತ್ರಿ, ಮುತ್ತುರಾಜ ಮಾಕಡವಾಲೆ, ರಾಮಣ್ಣ ಹಂಚಿನಮನಿ, ಇತರರು ಇದ್ದರು. ಗೌರಿ.ಆರ್. ಡಿ ನಿರೂಪಿಸಿದರು.
ಇದಕ್ಕೂ ಪೂರ್ವದಲ್ಲಿ ಕಲಾಭವನದಿಂದ ಏರ್ಪಡಿಸಿದ್ದ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಚಾಲನೆ ನೀಡಿದರು.