ಲಿಂ. ಶಿವಕುಮಾರ ಶ್ರೀಗಳು ಶೈಕ್ಷಣಿಕ ಕ್ರಾಂತಿ ಪುರುಷ

18 bvp news
Published on

ಬಸವಾಪಟ್ಟಣ: ದಲಿತರ ಬಗ್ಗೆ ಅನುಕಂಪ ಹೊಂದಿರುವ, ಸಮಬಾಳು- ಸಮಪಾಲು ತತ್ವದ ಚಿಂತಕರಾಗಿ, ಸ್ವಾತಂತ್ರ್ಯ ಪೂರ್ವದಲ್ಲೇ ಕುಗ್ರಾಮಗಳಲ್ಲಿ ವಿದ್ಯಾಸಂಸ್ಥೆ ತೆರೆದು ಗ್ರಾಮೀಣ ಮಕ್ಕಳ ಬಾಳನ್ನು ಹಸನುಗೊಳಿಸಿದ ಸಿರಿಗೆರೆ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಶೈಕ್ಷಣಿಕ ಕ್ರಾಂತಿ ಪುರುಷ ಎಂದು ಶಾಲೆ ಕಾರ್ಯದರ್ಶಿ ಬಿ.ಜಿ. ರುದ್ರೇಶ್ ಬಣ್ಣಿಸಿದರು.

ಚನ್ನಗಿರಿ ತಾಲೂಕಿನ ಬಸವಾಪಟ್ಟಣ ಗ್ರಾಮದ ಬಾಪೂಜಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಸಿರಿಗೆರೆಯ ಶಿವಕುಮಾರ ಗುರುಗಳ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮಾಜದ ಅಂಕು- ಡೊಂಕುಗಳನ್ನು ತಿದ್ದಲು ವೈಚಾರಿಕ ನೆಲೆಗಟ್ಟಿನ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಜನಮಾನಸದಲ್ಲಿ ಐಕ್ಯದ ಬೀಜ ಬಿತ್ತಿದರು. ಜತೆಗೆ ವಿಶ್ವಬಂಧು ಮರುಳಸಿದ್ದರ ಚಿಂತನೆ, ಬಸವಣ್ಣನವರ ತತ್ವ ಸಿದ್ಧಾಂತಗಳ ತಳಹದಿಯಲ್ಲಿ ಶರಣರ ಆಶಯಗಳನ್ನು ಈಡೇರಿಸುವ ಮಹತ್ಕಾರ್ಯಗಳನ್ನು ಮಾಡಿ ಶರಣ ದೀವಿಗೆ ಬೆಳಗಿಸಿದ್ದರು ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ಎಲ್.ಜಿ. ಮಧುಕುಮಾರ್ ಮಾತನಾಡಿ, ಸಿರಿಗೆರೆ ಮಠದ ಅಭ್ಯುದಯಕ್ಕಾಗಿ ತಮ್ಮ ಕಾಯಕ ನಿಷ್ಠೆ, ದೂರದೃಷ್ಟಿ, ಸಂಘಟನಾ ಶಕ್ತಿ, ನೇರ ನಿಷ್ಠುರ ನುಡಿ ಹಾಗೂ ದಿಟ್ಟ ಹೆಜ್ಜೆಗಳಿಂದ ದುಡಿಯುವ ಮಠವನ್ನಾಗಿ ಮಾಡಿ, ಶಿಷ್ಯರು- ಮಠದ ನಡುವೆ ಮಧುರ ಬಾಂಧವ್ಯ ನಿರ್ವಿುಸಿದ ಕೀರ್ತಿ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಗೆ ಸಲ್ಲುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹರೋಸಾಗರ ಗ್ರಾಮದ ಮಂಜುನಾಥ್, ನಾಗರಾಜ್, ರಾಮಚಂದ್ರಪ್ಪ, ಚಿರಡೋಣಿ ಗ್ರಾಮದ ತಿಪ್ಪೇಶಪ್ಪ, ಮುಖ್ಯಶಿಕ್ಷಕ ಎಂ. ಶ್ರೀಧರರಾವ್, ಶಿಕ್ಷಕರಾದ ಎಂ.ವಿ. ಯುವರಾಜ್, ಎಚ್.ಎಸ್. ಉಮಾಪತಿ, ಎಸ್.ಎಚ್. ಮಂಜುಳಾ, ಎಚ್. ಸುಜಾತಾ, ದೀಪಾ, ನಿಖಿತಾ, ಬೀಬಿ ಕುಬ್ರಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net