ನವೆಂಬರ್ ನಲ್ಲಿ 'ನುಡಿಮುತ್ತು' ತೆರೆಗೆ, ಕನ್ನಡ ಶಾಲೆ ಉಳಿಸಿ ಬೆಳೆಸುವ ಸಂದೇಶ ಸಾರುವ ಸಿನಿಮಾ

IMG_20240831_162714_343.jpg
Published on

ಹುಬ್ಬಳ್ಳಿ: ಸರ್ಕಾರಿ ಶಾಲೆಗಳು ಹೇಗಿವೆ, ಅಲ್ಲಿನ ಸೌಲಭ್ಯಗಳೇನು, ಅಲ್ಲಿ ಕಲಿತವರು ಏನೆಲ್ಲ ಸಾಧನೆ ಮಾಡಿದ್ದಾರೆ ಎಂಬುದನ್ನು ತಿಳಿಸಿಕೊಟ್ಟು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಸಿನಿಮಾ "ನುಡಿಮುತ್ತು' ನವೆಂಬರ್ 1ರಂದು ಬಿಡುಗಡೆಯಾಗಲಿದೆ ಎಂದು ಬಾಲನಟಿ ಭೈರವಿ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೈರವಿ ಕ್ರಿಯೇಷನ್ಸ್ ಸಂಸ್ಥೆ ನಿರ್ಮಿಸಿದ ಸಿನಿಮಾದ ಪ್ರಮುಖ ಉದ್ದೇಶ ಪ್ರತಿಯೊಬ್ಬರಿಗೂ ಶಿಕ್ಷಣ ಅವಶ್ಯಕ ಎಂಬುದನ್ನು ಸಾರುವುದಾಗಿದೆ ಎಂದರು.

ನನ್ನ ತಂದೆ ಸರ್ಕಾರಿ ಶಾಲೆಯಲ್ಲಿ ಓದಿದ್ದಾರೆ. ಕಷ್ಟಪಟ್ಟು ದುಡಿದು ಕುಟುಂಬ ನಿರ್ವಹಣೆ ಮಾಡುತ್ತಲೇ ನಮ್ಮನ್ನು ಸರ್ಕಾರಿ ಶಾಲೆಯಲ್ಲಿಯೇ ಓದಿಸಿ ನನ್ನ ಅಭಿರುಚಿಗೆ ತಕ್ಕಂತೆ ಬೆಳೆಯಲು ಪ್ರೇರಣೆ ನೀಡಿದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸುವ ಅವಕಾಶ ನನಗೆ ಸಿಕ್ಕಿತು ಎಂದು ಡ್ರಾಮಾ ಜ್ಯೂನಿಯರ್ ಸೀಸನ್ 4ರ ಫೈನಲಿಸ್ಟ್ ಹಾಗೂ ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ ಧಾರಾವಾಹಿಯ ಯಲ್ಲಮ್ಮ ಪಾತ್ರಧಾರಿಯೂ ಆಗಿರುವ ಭೈರವಿ ತಿಳಿಸಿದರು.

ನಟ ಸೂರ್ಯ ಪಿ.ಜೆ. ಮಾತನಾಡಿ, ಸರ್ಕಾರಿ ಶಾಲೆಗಳ ಬಗ್ಗೆ ಸಮಾಜದಲ್ಲಿರುವ ತಪ್ಪು ಕಲ್ಪನೆ ದೂರ ಆಗಬೇಕು. ಎಲ್ಲರೂ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಬೇಕು ಎಂಬ ಉದ್ದೇಶದಿಂದ ಚಿತ್ರ ನಿರ್ಮಿಸಲಾಗಿದೆ ಎಂದರು.

ನಿರ್ದೇಶಕ ಕಾರ್ತಿಕ ರಾಂ ಮಾತನಾಡಿ, ಎಲ್ಲ ಶಾಲೆಗಳಿಗಿಂತ ಸರ್ಕಾರಿ ಶಾಲೆ ಹೇಗೆ ಭಿನ್ನ ಎಂಬುದನ್ನು ತೋರಿಸಲಾಗಿದೆ. ಸರ್ಕಾರಿ ಅಧಿಕಾರಿಗಳು, ಶಿಕ್ಷಕರು, ನೌಕರರು ಮೊದಲು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಬೇಕು. ಕೇವಲ ಸರ್ಕಾರಿ ನೌಕರಿ ಬೇಕು, ಶಾಲೆ ಬೇಡ ಎಂದರೆ ಹೇಗೆ?. ಈ ಬಗ್ಗೆ ಎಲ್ಲರೂ ಗಂಭೀರವಾಗಿ ಚಿಂತನೆ ಮಾಡಬೇಕು ಎಂದರು.

ವಿನಾಯಕ ಕುಲಕರ್ಣಿ, ಎಲ್.ಐ. ಲಕ್ಕಮ್ಮನವರ, ರವಿ ದೊಡ್ಡಿಹಾಳ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net