

ಮಂಡ್ಯ: ಸಾವು ಎದುರು ಇದ್ದರೂ ಬದುಕುವ ಛಲ ಇರುವುದು ಮನುಷ್ಯನ ಸ್ವಭಾವ. ಇಂತಹ ಅದಮ್ಯ ಗುಣ ದಿ.ಚಲುವರಾಜು ಅವರಿಗಿತ್ತು ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಹೇಳಿದರು.
ನಗರದ ಗಾಂಧಿಭವನದಲ್ಲಿ ಡಾ.ಎಂ.ಎಸ್.ಚಲುವರಾಜು ಸ್ನೇಹ ಬಳಗದಿಂದ ಹಮ್ಮಿಕೊಂಡಿದ್ದ ವಿಕಲಚೇತನರ ಒಕ್ಕೂಟದ ರಾಜ್ಯಾಧ್ಯಕ್ಷರೂ ಆದ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ.ಎಂ.ಎಸ್.ಚಲುವರಾಜು ಅವರಿಗೆ ಶ್ರದ್ಧಾಂಜಲಿ ಮತ್ತು ನುಡಿನಮನ ಸಭೆಯಲ್ಲಿ ಮಾತನಾಡಿದರು. ಚಲುವರಾಜು ಅವರು ಬದುಕಿನಲ್ಲಿ ಅಪಾರ ಕನಸು ಕಂಡ ವ್ಯಕ್ತಿ. ಅನನ್ಯ ಅಂತಃಶಕ್ತಿ, ಇಚ್ಛಾಸಕ್ತಿ, ಕ್ರಿಯಾಶಕ್ತಿ ಹೊಂದಿದ್ದರು. ಉತ್ತಮ ನಡೆ ನುಡಿಯುಳ್ಳ ಅವರನ್ನು ಪರಲೋಕದಲ್ಲಿಯೂ ಕೆಲಸ ಮಾಡಲೆಂದು ದೇವರು ಬೇಗ ಅವರನ್ನು ಕರೆಸಿಕೊಂಡಿದ್ದಾರೆ ಎಂದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಕೆ.ಎಸ್.ರಾಜಣ್ಣ ಮಾತನಾಡಿ, ಚಲುವರಾಜು ಅವರು ಅಂಗವಿಕಲರ ಬಾಳಿನ ಕಣ್ಣಾಗಿದ್ದರು. ಎಲ್ಲರ ಶರೀರಕ್ಕೆ ಶಾರೀರವಾಗಿದ್ದರು. ಹೃದಯವಂತ, ಚೈತನ್ಯ ಪುರುಷರಾಗಿದ್ದರು. ಅವರ ಅಗಲಿಕೆಯಿಂದ ಅಂಗವಿಕಲರ ಸಮುದಾಯ ಅನಾಥವಾಗಿದೆ ಎಂದು ಹೇಳಿದರು.
ಮಂಡ್ಯ ವಿಶ್ವವಿದ್ಯಾನಿಲಯದ ಕುಲಸಚಿವ ಚಂದ್ರಯ್ಯ ಮಾತನಾಡಿ, ಚಲುವರಾಜು ಮಾತಲ್ಲಿ ಒರಟನಂತೆ ಕಂಡರೂ ಹೃದಯದಲ್ಲಿ ಮೃಧು ಸ್ವಭಾವ ಹೊಂದಿದ್ದರು. ಜಿಲ್ಲಾ ಸ್ವೀಫ್ ಸಮಿತಿ ರಾಯಭಾರಿಯಾಗಿದ್ದ ಅವರ ಜನಪ್ರಿಯತೆ, ಸೇವಾಭಾವ ಹೊಂದಿದ್ದರು ಎಂದರು.
ಶಿಕ್ಷಣಾಧಿಕಾರಿ ಚಂದ್ರಕಾಂತಾ, ಉಪನ್ಯಾಸಕರಾದ ಮಂಜುನಾಥ್, ಪರಮೇಶ್, ಹರೀಶ್ ಬಾಣಸವಾಡಿ, ಸಬ್ಬನಹಳ್ಳಿ ಶಿವಕುಮಾರ್, ಡಾ.ವೈ.ಎಸ್.ಶಿವರಾಮು ಮಾತನಾಡಿದರು. ಸ್ನೇಹ ಬಳಗದ ಕಾರಸವಾಡಿ ಮಹದೇವು, ಕೀಲಾರ ಕೃಷ್ಣೇಗೌಡ, ದೇವರಾಜ್ ಕೊಪ್ಪ, ಹನಿಯಂಬಾಡಿ ಶೇಖರ್, ಸಂತೆಕಸಲಗೆರೆ ಬಸವರಾಜು, ಹನಿಯಂಬಾಡಿ ರಾಮಕೃಷ್ಣ, ಸುಜಾತಾ ಕೃಷ್ಣ ಇತರರಿದ್ದರು.