ಗದಗನಲ್ಲಿ ನೆಟ್ಟೂರು ಟೆಕ್ನಿಕಲ್‌ ಟ್ರೇನಿಂಗ್‌ ಕೇಂದ್ರ ಆರಂಭ

IMG-20230915-WA0017 (1)
Published on

ಗದಗ: ಗದಗ ಕೋ– ಅಪರೇಟಿವ್‌ ಇಂಡಸ್ಟ್ರಿಯಲ್‌ ಎಸ್ಟೇಟ್‌ (ಜಿಸಿಐಇ) ಹಾಗೂ ನೆಟ್ಟೂರು ಟೆಕ್ನಿಕಲ್‌ ಟ್ರೇನಿಂಗ್‌ ಫೌಂಡೇಷನ್‌ (ಎನ್‌ಟಿಟಿಎಫ್‌) ಸಹಯೋಗದಲ್ಲಿ ಆರಂಭಿಸಲಿರುವ ತಾಂತ್ರಿಕ ತರಬೇತಿ ಕೇಂದ್ರ ಗದುಗಿನ ಯುವಕರ ಭವಿಷ್ಯ ಬದಲಿಸಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ.ಪಾಟೀಲ ತಿಳಿಸಿದರು.

ನಗರದ ಇಂಡಸ್ಟ್ರಿಯಲ್‌ ಎಸ್ಟೇಟ್‌ನಲ್ಲಿ ಶುಕ್ರವಾರ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 

‘ಕೈಗಾರಿಕೆಗಳಿಗೆ ಬೇಕಿರುವ ಉತ್ಕೃಷ್ಟ ಮಾನವ ಸಂಪನ್ಮೂಲವನ್ನು ಸೃಜಿಸುವ ನಿಟ್ಟಿನಲ್ಲಿ ಎನ್‌ಟಿಟಿಎಫ್‌ ದೇಶದಲ್ಲಿ ತನ್ನದೇ ಆದ ಹಿರಿಮೆ ಹೊಂದಿದೆ. ಇಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಇಂದು ದೇಶ ವಿದೇಶಗಳಲ್ಲಿ ಉತ್ತಮ ಉದ್ಯೋಗ ಪಡೆದುಕೊಂಡಿದ್ದಾರೆ. ಗದಗ ಜಿಲ್ಲೆಯಲ್ಲಿನ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಜಿಸಿಐಇ ಇದೇ ಮೊದಲ ಬಾರಿಗೆ ಆಸಕ್ತ ಯುವಕರಿಗೆ ತಾಂತ್ರಿಕ ತರಬೇತಿ ನೀಡುವ ಮೂಲಕ ಅವರ ಭವಿಷ್ಯವನ್ನು ಉಜ್ವಲಗೊಳಿಸುವ ಕನಸು ಹೊಂದಿದೆ’ ಎಂದು ತಿಳಿಸಿದರು.

‘1989ರಲ್ಲಿ ಗದಗ ನಗರದಲ್ಲಿ ಜಿಸಿಐಇ ಮಾಡುವ ಸಂದರ್ಭದಲ್ಲಿ ಹತ್ತಾರು ಯುವಕರ ಕನಸುಗಳು ಜತೆಯಾಗಿದ್ದವು. ನಮ್ಮ ಪ್ರಯತ್ನ ಕಂಡ ಅನೇಕರು ಪ್ರಾರಂಭದಲ್ಲಿ ಟೀಕಿಸಿದ್ದರು. ಅವರೆಲ್ಲರ ಟೀಕೆ ಟಿಪ್ಪಣಿಗಳನ್ನು ಸವಾಲಾಗಿ ಸ್ವೀಕರಿಸಿ, ಇಲ್ಲಿ ಉದ್ಯಮಗಳನ್ನು ಸ್ಥಾಪಿಸಿದೆವು. ಅವು ಇಂದು ಹೆಮ್ಮರವಾಗಿ ಬೆಳೆದಿವೆ. ಸಾಕಷ್ಟು ಮಂದಿಗೆ ಉದ್ಯೋಗ ನೀಡಿವೆ. ಈಗ 2023ರಲ್ಲಿ ಕೈಗಾರಿಕಾ ತರಬೇತಿ ಕೇಂದ್ರ ಸ್ಥಾಪನೆ ಮೂಲಕ ಕೈಗಾರಿಕೆಗಳಿಗೆ ಬೇಕಿರುವ ತಾಂತ್ರಿಕ ಕೌಶಲ ಹೊಂದಿರುವ ಮಾನವ ಸಂಪನ್ಮೂಲ ಸೃಷ್ಟಿಸುವ ಕನಸು ಕಂಡಿದ್ದೇವೆ. ಈ ಕಾರಣಕ್ಕಾಗಿಯೇ ಜಿಸಿಐಇ ವತಿಯಿಂದ ಯುವಕರಿಗೆ ಶೈಕ್ಷಣಿಕ ಚಟುವಟಿಕೆ ಆರಂಭಿಸಲಾಗಿದೆ’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶೇ.100 ರಷ್ಟು ಎಸ್ಸೆಲ್ಸಿ ಫಲಿತಾಂಶ ಸಾಧಿಸಿದ ಸರ್ಕಾರಿ, ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ತಲಾ 25000 ರೂ. ವಿತರಿಸಿ ಸನ್ಮಾನಿಸಲಾಯಿತು

ಆನಂದ ಪೋತ್ನಿಸ್‌  ಆರ್‌.ಆರ್‌.ಓದುಗೌಡರ, ಪ್ರಕಾಶ್‌ ಬೊಮ್ಮನಹಳ್ಳಿ, ಪ್ರಭು ದಂಡೋಟಿ, ಡಿಡಿಪಿಐ ರಡ್ಡೇರ, ಎನ್‌ಟಿಟಿಎಫ್‌ನ ಸುದರ್ಶನ್‌, ಸತೀಶ್‌, ಆನಂದ್‌ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net