ಎನ್‌ಟಿಆರ್ ಪುತ್ಥಳಿ ಅನಾವರಣ

BLY- 5-2
ಬಳ್ಳಾರಿ ನಗರದ ಕಮ್ಮ ಭವನದ ಮುಂದೆ ಮಂಗಳವಾರ ಎನ್‌ಟಿಆರ್ ಪುತ್ಥಳಿಯನ್ನು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅನಾವರಣಗೊಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ, ಶಾಸಕ ನಾರಾ ಭರತ್ ರೆಡ್ಡಿ ಮತ್ತಿತರರಿದ್ದರು.
Published on

ಬಳ್ಳಾರಿ : ಪದ್ಮಶ್ರೀ ನಂದಮೂರಿ ತಾರಕ ರಾಮರಾವ್(ಎನ್‌ಟಿಆರ್) ದೇಶದ ಸಂಪತ್ತು. ಅವರು ಕೇವಲ ವ್ಯಕ್ತಿ ಅಲ್ಲ. ಮಹಾಶಕ್ತಿ ಎಂದು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದರು.

ನಗರದ ಕಮ್ಮ ಭವನದ ಮುಂದೆ ಮಂಗಳವಾರ ಎನ್‌ಟಿಆರ್ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದ ಅವರು, ಸಿನಿಮಾ ರಂಗದಲ್ಲಿ ಹಾಗೂ ರಾಜಕೀಯ ಕ್ಷೇತ್ರದಲ್ಲಿ ತನ್ನದೆಯಾದ ಕೊಡುಗೆ ನೀಡಿದ್ದಾರೆ. ಭವಿಷ್ಯದಲ್ಲಿ ಅಂತಹ ವ್ಯಕ್ತಿ ಮತ್ತೊಬ್ಬರು ಹುಟ್ಟುವುದಿಲ್ಲ ಎಂದರು.

ರಾಮ, ಕೃಷ್ಣ, ಭೀಮ ಹೀಗೆ ಅನೇಕ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಅಭಿನಯದಲ್ಲಿ ಪರಕಾಯ ಪ್ರವೇಶ ಮಾಡುತ್ತಿದ್ದರು. ಅಂತಹ ಸರಳ, ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದರು ಎಂದು ಸ್ಮರಿಸಿದರು. ಈ ಭೂಮಿ ಮೇಲೆ ಕೆಲವರು ಹುಟ್ಟುತ್ತಾರೆ, ಸಾಯುತ್ತಾರೆ. ಆದರೆ ಶಾಶ್ವತವಾಗಿ ಜೀವಂತವಾಗಿರುವವರು ವ್ಯಕ್ತಿ ಅಂದರೆ ಅದು ಎನ್‌ಟಿಆರ್. 1983ರಲ್ಲಿ ಮುಖ್ಯಮಂತ್ರಿಆಗಿದ್ದಾಗ ಅವರು ಜಾರಿಗೆ ತಂದಿದ್ದ ಆಹಾರ ಭದ್ರತೆ ಯೋಜನೆ ದೇಶಕ್ಕೆ ಮಾದರಿ ಆಗಿದೆ. ತೆಲುಗು ಜನರಿಗೆ ಅಗೌರವ ತೋರಿದ ಹಿನ್ನೆಲೆ ತೆಲುಗು ದೇಶಂ ಪಾರ್ಟಿ (ಟಿಡಿಪಿ) ಹುಟ್ಟಿಕೊಂಡಿತು ಎಂದರು.

ಇನ್ನು ಕಿಕ್ಕಿರಿದ ಜನರನ್ನು ಕಂಡು ನಾನು ಆಂಧ್ರದಲ್ಲಿದ್ದೇನೆಯೇ ಅಥವಾ ಬಳ್ಳಾರಿಯಲ್ಲಿ ಇದ್ದೇನೆ ಎನ್ನುವುದನ್ನು ಊಹಿಸಿಕೊಳ್ಳಲು ಆಗುತ್ತಿಲ್ಲ. 1999ರಲ್ಲಿ ಬಳ್ಳಾರಿಗೆ ಬಂದಿದ್ದೆ. ಮತ್ತೆ ಈಗ ಬಂದಿದ್ದೇನೆ. ನಿಮ್ಮ ಅಭಿಮಾನ ಹೀಗೆ ಇರಲಿ ಎಂದು ಹಾರೈಸಿದರು. ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಮಾತನಾಡಿ, ದೇಶದ ಸಿನಿಮಾ ರಂಗ ಅಲ್ಲದೆ ರಾಜಕೀಯ ಕ್ಷೇತ್ರದಲ್ಲೂ ಎನ್‌ಟಿಆರ್ ಅವರ ಕೊಡುಗೆ ಅಪಾರ ಎಂದು ನುಡಿದರು.

ಶಾಸಕ ನಾರಾ ಭರತ್ ರೆಡ್ಡಿ ಮಾತನಾಡಿದ, ಎನ್‌ಟಿಆರ್ ದೇಶದ ಮಹಾನ್ ವ್ಯಕ್ತಿ. ದೇಶಕಂಡ ಮುಖ್ಯಮಂತ್ರಿಗಳಲ್ಲಿ ಎಸ್.ಎಂ.ಕೃಷ್ಣ ಹಾಗೂ ಚಂದ್ರಬಾಬು ನಾಯ್ಡು ಪ್ರಮುಖರು. ಕರ್ನಾಟಕದಲ್ಲಿ ಬೆಂಗಳೂರು ಮತ್ತು ಆಂಧ್ರ ಪ್ರದೇಶದಲ್ಲಿ ಹೈದರಾಬಾದ್ ಅನ್ನು ಐಟಿ ಹಬ್ ಆಗಿ ಮಾಡಿದ ಕೀರ್ತಿ ಇಬ್ಬರಿಗೂ ಸಲ್ಲುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪಾಲಿಕೆ ಮೇಯರ್ ಡಿ.ತ್ರಿವೇಣಿ, ಮಾಜಿ ಮೇಯರ್ ಎಂ.ರಾಜೇಶ್ವರಿ, ಪಾಲಿಕೆ ಸದಸ್ಯ ಪ್ರಬಂಜನ್ ಸೇರಿದಂತೆ ಕಮ್ಮ ಸಂಘದ ಪದಾಧಿಕಾರಿಗಳು, ಮುಖಂಡರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net