ಅ.27ರಿಂದ ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ - 12 ರಾಷ್ಟ್ರಗಳ 450 ಕ್ರೀಡಾಪಟುಗಳು ಭಾಗಿ - ಸಿದ್ಧತೆ ಅಂತಿಮ ಹಂತದಲ್ಲಿ

mng--25 Oct Badminton
Published on

ಮಂಗಳೂರು: ರಾಜ್ಯದಲ್ಲೇ ಪ್ರಥಮವಾಗಿ ಚೀಫ್ ಮಿನಿಸ್ಟರ್ಸ್ ಮಂಗಳೂರು ಇಂಡಿಯಾ ಇಂಟರ್ ನ್ಯಾಷನಲ್ ಚಾಲೆಂಜ್ 2025 ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಪಂದ್ಯಾವಳಿ ಉರ್ವ ಒಳಾಂಗಣ ಕ್ರೀಡಾಂಗಣದಲ್ಲಿ ಅ.27ರಿಂದ ನ.2ರ ತನಕ ನಡೆಯಲಿದ್ದು, ಅಂತಿಮ ಹಂತದ ಸಿದ್ಧತೆ ನಡೆಯುತ್ತಿದೆ.

ಅ.27ರಂದು ಸಿಎಂ ಸಿದ್ದರಾಮಯ್ಯ ಪಂದ್ಯಾವಳಿಗೆ ಚಾಲನೆ ನೀಡಲಿದ್ದಾರೆ. ಸ್ಪೀಕರ್ ಯು.ಟಿ.ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಂಸದ ಕ್ಯಾ.ಬ್ರಿಜೇಶ್ ಚೌಟ ಸಹಿತ ಗಣ್ಯರು ಭಾಗವಹಿಸಲಿದ್ದು, ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಲಿದ್ದಾರೆ.

ಭಾರತೀಯ ಬ್ಯಾಡ್ಮಿಂಟನ್ ಅಸೋಸಿಯೇಶನ್, ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಶನ್ ಮಾರ್ಗದರ್ಶನದಲ್ಲಿ ದ.ಕ. ಬ್ಯಾಡ್ಮಿಂಟನ್ ಅಸೋಸಿಯೇಶನ್ ಪಂದ್ಯಾವಳಿಯ ಆತಿಥ್ಯ ವಹಿಸಿದೆ. ಆರು ದಿನಗಳ ಕಾಲ ನಡೆಯುವ ಪಂದ್ಯಾವಳಿಗೆ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ನೇತೃತ್ವದಲ್ಲಿ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ದಕ್ಷಿಣ ಕನ್ನಡ ಬ್ಯಾಡ್ಮಿಂಟನ್ ಅಸೋಸಿಯೇಶನ್ ಗೌರವಾಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ನೇತೃತ್ವದಲ್ಲಿ ಪಂದ್ಯಾವಳಿಗೆ ಸಿದ್ಧತೆ ನಡೆದಿದೆ.

ಏಷ್ಯಾಮ ಯುರೋಪ್, ಅಮೇರಿಕ, ರಷ್ಯಾ, ಯುಎಇ, ಮಲೇಷ್ಯಾ, ಕೆನಡಾ, ಇಂಡೋನೇಷ್ಯಾ, ಶ್ರೀಲಂಕಾ, ಥಾಯ್ಲೆಂಡ್, ಬಾಂಗ್ಲಾದೇಶ, ಸಿಂಗಾಪುರ, ಇಂಗ್ಲೆಂಡ್, ಭಾರತ ಸೇರಿದಂತೆ 12 ದೇಶಗಳ 450 ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ದೇಶದ 350 ಮತ್ತು ವಿದೇಶದ 100ರಷ್ಟು ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ.

ಮುಖ್ಯ ರೆಫರಿ ಮಾಲ್ಡೀವ್ಸ್‌ನವರಾಗಿದ್ದು, ವಿಶ್ವದ ವಿವಿಧ ದೇಶಗಳಿಂದ 200ರಷ್ಟು ತಂತ್ರಜ್ಞರು, ಅಧಿಕಾರಿಗಳು ಭಾಗವಹಿಸುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಆಹಾರ, ವಸತಿ, ಸಾರಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ರಾಜ್ಯ ಸರ್ಕಾರದಿಂದ ಸಿಎಂ 1 ಕೋಟಿ ರೂ. ಅನುದಾನ ನೀಡಲಿದ್ದು, ಒಟ್ಟು 2.5 ಕೋಟಿ ರೂ. ಖರ್ಚು ಅಂದಾಜಿಸಲಾಗಿದೆ.

ಬಿಡಬ್ಲುೃಎಫ್ ಇಂಟರ್ ನ್ಯಾಷನಲ್ ಚಾಲೆಂಜ್ ಪಂದ್ಯಗಳು ಕ್ರೀಡಾಂಗಣದ ಮೇಲಂತಸ್ತಿನ ನಾಲ್ಕು ಮತ್ತು ನೆಲ ಅಂತಸ್ತಿನ ನಾಲ್ಕು ಸೇರಿದಂತೆ ಎಂಟು ಕೋರ್ಟ್‌ಗಳಲ್ಲಿ ಏಕಕಾಲದಲ್ಲಿ ಪಂದ್ಯಾವಳಿ ನಡೆಯಲಿವೆ. ಪಂದ್ಯಾಟದ ಶ್ರೇಣಿಯನ್ನು ಗ್ರೇಡ್ 3, ಲೆವೆಲ್ 1 ಎಂದು ವರ್ಗೀಕರಿಸಲಾಗಿದೆ. ಇದು ಕಾಂಟಿನೆಂಟಲ್ ಸರ್ಕ್ಯೂಟ್‌ನ ಭಾಗವಾಗಿದ್ದು, ಅಂತಾರಾಷ್ಟ್ರೀಯ ಸರಣಿ (ಹಂತ 2) ಮತ್ತು ಫ್ಯೂಚರ್ ಸರಣಿ (ಹಂತ 3) ಪಂದ್ಯಗಳನ್ನು ಒಳಗೊಂಡಿದೆ.

ಮಂಗಳೂರಿನಲ್ಲಿ ರಾಜ್ಯದಲ್ಲೇ ಪ್ರಥಮ ಬಾರಿಗೆ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಪಂದ್ಯಾವಳಿ ನಡೆಯುತ್ತಿದೆ. ಇದು ಮಂಗಳೂರಿಗೆ ಹೆಮ್ಮೆಯ ವಿಚಾರವಾಗಿದ್ದು, ಪ್ರವಾಸೋದ್ಯಮಕ್ಕೆ ಪೂರಕವಾಗಿದೆ. ಇದು ಮಂಗಳೂರಿಗೆ ಹೆಮ್ಮೆಯ ವಿಚಾರ. ಪೂರಕ ಸಿದ್ಧತೆಗಳನ್ನು ಮಾಡಲಾಗಿದೆ.

ಸಂತೋಷ್ ಕುಮಾರ್ ಶೆಟ್ಟಿ

ಗೌರವಾಧ್ಯಕ್ಷ, ದ.ಕ. ಬ್ಯಾಡ್ಮಿಂಟನ್ ಅಸೋಸಿಯೇಶನ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net