ಸರ್ಕಾರಗಳಿಗಿಲ್ಲ ಬಡವರ ಪರ ಕಾಳಜಿ: ಎನ್‌ಎಸ್‌ಯುಐ ಆರೋಪ

26 smg 4
Published on

ಶಿವಮೊಗ್ಗ: ಕರೊನಾದಂತಹ ಕಾಲದಲ್ಲೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಬಡವರ ಪರ ಕಾಳಜಿ ಇಲ್ಲ ಎಂದು ಎನ್‌ಎಸ್‌ಯುಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ಆರೋಪ ಮಾಡಿದರು.

ದೇಶದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಖಂಡಿಸಿ ಜಿಲ್ಲಾ ಎನ್‌ಎಸ್‌ಯುಐ ಕಾರ್ಯಕರ್ತರು ಸೋಮವಾರ ಸೈನ್ಸ್ ಮೈದಾನದಲ್ಲಿ ಬೃಹತ್ ಸೈಕಲ್ ಜಾಥಾ ಹಾಗೂ ಗೋಪಿ ವೃತ್ತದಲ್ಲಿ ಬಹಿರಂಗ ಸಭೆ ಉದ್ಘಾಟಿಸಿ ಮಾತನಾಡಿ, 7 ವರ್ಷಗಳಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಬೆಲೆಯನ್ನು ನಿರಂತರ ಏರಿಕೆ ಮಾಡಲಾಗುತ್ತಿದೆ. ಕರೊನಾದಂತಹ ಸಂದರ್ಭದಲ್ಲೇ 80 ರೂ. ಇದ್ದ ಪೆಟ್ರೋಲ್ ಬೆಲೆ ಇಂದು 107 ರೂ. ದಾಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಕಡಿಮೆಯಾಗಿದ್ದರೂ ಕೇಂದ್ರ ಸರ್ಕಾರ ಮಾತ್ರ ನಿರಂತರ ಬೆಲೆ ಏರಿಕೆ ಮಾಡುತ್ತಲೇ ಬಂದಿದೆ. ಇದರಿಂದ ಮೊದಲೇ ದೈನಂದಿನ ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನಸಾಮಾನ್ಯರ ಮೇಲೆ ಗದಾಪ್ರಹಾರ ನಡೆಸಿದಂತಾಗಿದೆ. ಕೂಡಲೇ ಕೇಂದ್ರ ಸರ್ಕಾರ ಪೆಟ್ರೋಲ್ -ಡೀಸೆಲ್ ಬೆಲೆ ಇಳಿಕೆ ಮಾಡಬೇಕು ಎಂದು ಆಗ್ರಹಿಸಿದರು.

ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್, ಭದ್ರಾವತಿ ಯುವ ಮುಖಂಡ ಗಣೇಶ್, ಸೂಡಾ ಮಾಜಿ ಅಧ್ಯಕ್ಷ ಎನ್.ರಮೇಶ್, ಮಹಾನಗರ ಪಾಲಿಕೆ ಪ್ರತಿಪಕ್ಷದ ನಾಯಕಿ ಯಮುನಾ ರಂಗೇಗೌಡ, ಪ್ರಮುಖರಾದ ಜಿ. ಮಧುಸೂದನ್, ಕೆ.ಚೇತನ್, ಎಚ್.ಎಸ್.ಬಾಲಾಜಿ, ವಿಜಯ್, ರವಿ, ಮಹಮ್ಮದ್ ನಿಹಾಲ್, ವಿನಯ್, ಗಿರಿ, ಭರತ, ಶ್ರೀಜಿತ್, ಅಬ್ದುಲ್ಲಾ, ಪುರಲೆ ಮಂಜು ಜಾಥಾದಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net