

ಹುಬ್ಬಳ್ಳಿ: ಹದಿನಾಲ್ಕನೆಯ ಜೈನ ತೀರ್ಥಂಕರ ಅನಂತನಾಥರ ಸುಮಾರು 1300 ವರ್ಷ ಪುರಾತನ ಪ್ರತಿಮೆ ಇರುವ ಹಳೇಹುಬ್ಬಳ್ಳಿಯ ಅಸಾರ ಓಣಿಯ ಜೈನ ಮಂದಿರದ ವಾರ್ಷಿಕ ಪೂಜಾ ಮಹೋತ್ಸವ ಅಂಗವಾಗಿ ಸೆ. 4ರಂದು ನೂತನ ಶ್ರೀ ಭೈರವ ಕ್ಷೇತ್ರಪಾಲ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಏರ್ಪಾಟಾಗಿದೆ.
ವರೂರು ನವಗ್ರಹ ತೀರ್ಥ ಕ್ಷೇತ್ರದದ ಶ್ರೀ ಧರ್ಮಸೇನ ಭಟ್ಟಾರಕರು ಹಾಗೂ ಹೊಂಬುಜದ ಶ್ರೀ ದೇವೇಂದ್ರಕೀರ್ತಿ ಭಟ್ಟಾರಕರು ಸಾನ್ನಿಧ್ಯ ವಹಿಸುವರು. ಪ್ರತಿಮೆಗೆ ಬೆಳಗ್ಗೆ 6ರಿಂದ ಪೂಜಾ ವಿಧಿ ವಿಧಾನಗಳು ಆರಂಭಗೊಳ್ಳಲಿದೆ. ಶುಭ ಮುಹೂರ್ತದಲ್ಲಿ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದೆ. 9.20ಕ್ಕೆ ಅಕ್ಕಿಪೇಟೆಯ ಶ್ರೀ ಪಾರ್ಶ್ವನಾಥ ಜಿನಮಂದಿರದಲ್ಲಿ ನಿಯೋಜಿತ ಶ್ರೀ ಬ್ರಹ್ಮದೇವ ಮಂದಿರ ಹಾಗೂ ಧ್ಯಾನ ಮಂದಿರಗಳಿಗೆ ಭೂಮಿ ಪೂಜೆ ನಂತರ ಶ್ರೀ ಅನಂತನಾಥ ಬಸದಿವರೆಗೆ ಆಗ್ರೋದಕ ಮೆರವಣಿಗೆ, ಶ್ರೀ ಜಿನರಿಗೆ 108 ಮಂಗಲ ಕಳಶಾಭಿಷೇಕ, ಶಾಂತಿಪಾಠ, ಯಕ್ಷಿ ದೇವತೆಗಳ ಷೋಡಶೋಪಚಾರ, ಕ್ಷೇತ್ರಪಾಲ ಪ್ರತಿಮೆಗೆ ವಿಶೇಷ ಅಲಂಕಾರ, ಭಟ್ಟಾರಕರ ಮಂಗಲ ಪ್ರವಚನಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.