

ಹುಬ್ಬಳ್ಳಿ : ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರಗಳಲ್ಲಿ ವಿದ್ಯಾರ್ಥಿಗಳು ಸಕ್ರೀಯವಾಗಿ ಭಾಗವಹಿಸಿ ಸೇವಾ ಮನೋಭಾವವನ್ನು ಬೆಳೆಸಿಕೊಂಡು ಸ್ವಚ್ಚ, ಸಮೃದ್ಧ ನಾಡು ಕಟ್ಟುವ ಕೆಲಸಕ್ಕೆ ಕೈಜೊಡಿಸಬೇಕು ಎಂದು ಕೆಎಲ್ಇ ಟೆಕ್ ಗ್ರಂಥಪಾಲಕ ಡಾ. ಸುರೇಶ ಹೊರಕೇರಿ ಹೇಳಿದರು.
ನಗರದ ಜೆಎಸ್ಎಸ್ ಸಕ್ರಿ ಕಾನೂನು ಮಹಾವಿದ್ಯಾಲಯವು ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನಾ (ಎನ್ಎಸ್ಎಸ್) ಘಟಕದ ವಾರ್ಷಿಕ ವಿಶೇಷ ಶಿಬಿರ 2023-24 ಸಮಾರಂಭದಲ್ಲಿ ಅವರು ಮಾತನಾಡಿದರು.
ರಾಷ್ಟ್ರೀಯ ಸೇವಾ ಯೋಜನೆಯು ಪರಿಸರ ಪ್ರಜ್ಞೆ, ನಾಗರಿಕ ಪ್ರಜ್ಞೆ, ಸ್ವಚ್ಛತೆ, ಶಿಕ್ಷಣ, ಆರೋಗ್ಯ, ರಾಷ್ಟ್ರೀಯ ಏಕತೆ, ವಿಭಿನ್ನ ಸಂಸ್ಕೃತಿಯ ಪರಿಚಯ, ಎಲ್ಲರನ್ನು ಪ್ರೀತಿ, ಗೌರವದಿಂದ ಕಾಣುವುದು, ಮುಂತಾದ ವಿಷಯಗಳ ಕುರಿತು ಅರಿವು ಮೂಡಿಸುವುದು, ವಿದ್ಯಾರ್ಥಿಗಳಿಗೆ ಶಿಸ್ತು, ಸಮಯಪ್ರಜ್ಞೆಯನ್ನು ಕಲಿಸಿಕೊಡುತ್ತದೆ ಎಂದರು.
ನಿವೃತ್ತ ಪ್ರಾಚಾರ್ಯ ಪ್ರೊ. ಶಂಕರಗೌಡ್ರ ಸಾತ್ಮಾರ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ಶಿಬಿರಗಳು ಮನಸ್ಸುಗಳನ್ನು ಪರಿವರ್ತಿಸುತ್ತವೆ. ನಿಸ್ವಾರ್ಥ ಸೇವೆ ಸಲ್ಲಿಸಬೇಕು. ಸಮಾಜಕ್ಕೆ ಯಾವುದೇ ಅಪೇಕ್ಷೆ ಇಲ್ಲದೆ ಸೇವೆ ಸಲ್ಲಿಸುವ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಪ್ರಕೃತಿಯೊಂದಿಗೆ ಬೆರೆಯಬೇಕು. ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್್ಟ ಜ್ಞಾನವಿಕಾಸ ಸಮನ್ವಯ ಅಧಿಕಾರಿ ವಿಜಯಲಕ್ಷ್ಮೀ ಮಾತನಾಡಿ, ಗ್ರಾಮಾಭಿವೃದ್ದಿ ಯೋಜನೆಯು ಗ್ರಾಮಗಳ ಅಭಿವೃದ್ದಿಗೆ ಹೆಚ್ಚು ಸಹಕಾರಿಯಾಗಿದೆ. ಮಹಿಳೆಯರ ಸರ್ವತೋಮುಖ ಅಭಿವೃದ್ದಿಗೆ ಕಾರಣವಾಗಿದೆ. ಮಹಿಳೆಯರ ಆರ್ಥಿಕ ಪ್ರಗತಿಗೆ ಸಹಾಯವನ್ನು ಒದಗಿಸುತ್ತಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯ ಪ್ರಾಧ್ಯಾಪಕಿ ಪ್ರೊ. ಶೋಭಾ ಜಾಬಿನ್ ಮಾತನಾಡಿ, ಮಕ್ಕಳು ಉತ್ತಮ ಆರೋಗ್ಯ ಹೊಂದಲು ಉತ್ತಮ ಆಹಾರ ಸೇವನೆ ಮಾಡಬೇಕು. ಹೆಚ್ಚು ನೀರು ಕುಡಿಯಬೇಕು ಎಂದು ಹೇಳಿದರು.
ರಾಷ್ಟ್ರೀಯ ಸೇವಾ ಯೋಜನೆ ಅಶಿಕಾರಿ ಸುರೇಶ ಲಿಂಬಿಕಾಯಿ, ಪ್ರೊ. ಬಾಬುಲಾಲ್ ದರಗದ, ಪ್ರೊ. ಶ್ರೀಶೈಲ ಮುಧೋಳ, ಪ್ರೊ. ದೀಪಾ ಪಾಟೀಲ, ವಿದ್ಯಾರ್ಥಿಗಳು, ಗ್ರಾಮಸ್ಥರು ಇದ್ದರು. ಗೌರಮ್ಮ ಹೊಸಮನಿ ಪ್ರಾಥಿಸಿದರು. ವಿನಾಯಕ ಬಾದರಿ ಸ್ವಾಗತಿಸಿದರು. ರಾಘವೇಂದ್ರ ಕಲಾಲ ನಿರೂಪಿಸಿದರು. ನಿವೇದಿತಾ ಹೆಳವರ ವಂದಿಸಿದರು.