

ಮದ್ದೂರು: ರಾಷ್ಟ್ರೀಯ ಸೇವಾ ಯೋಜನೆಯು ಶಿಬಿರಾರ್ಥಿಗಳಿಗೆ ಸೇವಾ ಮನೋಭಾವ ಹಾಗೂ ಜೀವನ ಮೌಲ್ಯ ಕಲಿಸುವಲ್ಲಿ ಮಹತ್ತರವಾಗಿದ್ದು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರಗಳಲ್ಲಿ ಭಾಗವಹಿಸಬೇಕೆಂದು ಎಂ.ಎಚ್.ಚನ್ನೇಗೌಡ ವಿದ್ಯಾಸಂಸ್ಧೆಯ ಕಾರ್ಯದರ್ಶಿ ಸಿ.ಅಪೂರ್ವಚಂದ್ರ ಹೇಳಿದರು.
ತಾಲೂಕಿನ ಬೆಳತೂರು ಗ್ರಾಮದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಎಚ್.ಕೆ.ವೀರಣ್ಣಗೌಡ ಪದವಿಪೂರ್ವ ಕಾಲೇಜಿನ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಉದ್ಟಾಟಿಸಿ ಮಾತನಾಡಿದರು.
ಭಾರತವು ಗಾಮೀಣ ಪ್ರದೇಶಗಳಿಂದ ಕೂಡಿದ್ದು ಗಾಂಧೀಜಿ ಅವರ ಪರಿಕಲ್ಪನೆಯಲ್ಲಿ ಪ್ರಾರಂಭವಾದ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳಲ್ಲಿ ವಿದ್ಯಾರ್ಥಿಗಳು ಸಮರ್ಪಣಾ ಭಾವದಿಂದ ತೊಡಗಿಸಿಕೊಳ್ಳುವುದರ ಮೂಲಕ ಭಾವೈಕೈತೆ, ಸೌಹಾರ್ದತೆ, ಸಹಕಾರ, ಸಂಯಮ, ವ್ಯಕ್ತಿತ್ವ ವಿಕಸನ, ಸ್ವಚ್ಛತೆ ಒಳಗೊಂಡಂತೆ ಜೀವನದ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಸಮಾಜಮುಖಿ ವ್ಯಕ್ತಿಯಾಗಿ ರೂಪುಗೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಇಂದಿನ ಶಿಕ್ಷಣ ಹಾಗೂ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ಕೇವಲ ಅಂಕ ಗಳಿಕೆಗೆ ಸೀಮಿತವಾಗುತ್ತಿದ್ದಾರೆ. ಪಠ್ಯೇತರ ಚಟುವಟಿಕೆಯಾದ ಕ್ರೀಡೆ, ಸಾಂಸ್ಕೃತಿಕ ಹಾಗೂ ಸೇವಾ ಶಿಬಿರಗಳಲ್ಲಿ ಭಾಗವಹಿಸಿ ಮಾನವೀಯ ಗುಣಗಳನ್ನು ಮೈಗೊಡಿಸಿಕೊಂಡು ಪರಿಪೂರ್ಣ ವ್ಯಕ್ತಿಯಾಗಿ ರೂಪುಗೊಳ್ಳುವುದರ ಜತೆಗೆ ಗ್ರಾಮೀಣ ಪ್ರದೇಶದ ಜನರ ಅಭ್ಯುದಯಕ್ಕಾಗಿ ದುಡಿಯಬೇಕೆಂದು ಹೇಳಿದರು.
ಹೊಸಕೆರೆ ಗ್ರಾಪಂ ಅಧ್ಯಕ್ಷೆ ಶಾಂತಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಪಂ ಉಪಾಧ್ಯಕ್ಷೆ ನಿರ್ಮಲಾ ಕೆಂಪಯ್ಯ, ಸದಸ್ಯರಾದ ಡಿ.ನಳಿನಾಕುಮಾರಿ, ಅನಂತರಾಮು, ಮುಖಂಡರಾದ ಬಿ.ಎಂ.ಶಿವರಾಮು, ಎಂ.ಶಿವರಾಜು ಪ್ರಾಂಶುಪಾಲರಾದ ಯು.ಎಸ್.ಶಿವಕುಮಾರ್, ಜಿ.ಎಸ್.ಶಂಕರೇಗೌಡ, ಶಿಬಿರಾಧಿಕಾರಿಗಳಾದ ಎಚ್.ಎಸ್.ಪಂಚಲಿಂಗೇಗೌಡ ಹಾಗೂ ಸಹ ಶಿಬಿರಾಧಿಗಳಾದ ಎನ್.ರೇವಣ್ಣ, ಸಿ.ಜಯವರ್ಧನ್, ಎಂ.ಟಿ.ಮೋಹನ್‌ಕುಮಾರ್, ಜಿ.ಸುರೇಂದ್ರ, ಬಿ.ಸಿ.ಶಿವಕುಮಾರ್ ಇದ್ದರು.