

ವಿಜಯಪುರ: ಎನ್‌ಎಸ್‌ಎಸ್ ಎಂಬುದು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆ ಬೆಳೆಸುವುದರೊಂದಿಗೆ ಕಷ್ಟದಲ್ಲಿ ಹೇಗೆ ಬೆಳೆದು ನಿಲ್ಲಬೇಕು ಎಂಬುದರ ಕುರಿತು ತಿಳಿಸುವ ಮಾರ್ಗವಾಗಿದೆ ಎಂದು ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿ.ಎಂ. ತ್ಯಾಗರಾಜ ಹೇಳಿದರು.
ನಗರದ ಮಾರ್ಗದರ್ಶಿ ಸಮೂಹ ಸಂಸ್ಥೆಯ ಎಸ್.ಬಿ.ಜೆ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಎನ್‌ಎನ್‌ಎಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಸೋಮವಾರ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಮುಂದಿನ ಜೀವನದ ಗುರಿ ತಲುಪಲು ಸದೃಢ ತಳಪಾಯ ಶಿಕ್ಷಣದಿಂದ ನಿರ್ಮಾಣವಾಗುತ್ತದೆ. ಶಿಕ್ಷಣ ಪ್ರತಿಯೊಬ್ಬ ವಿದ್ಯಾರ್ಥಿಯ ಆತ್ಮದ ಶಕ್ತಿಯಾಗಿದೆ ಎಂದರು.
ಶಿಕ್ಷಣ ತಜ್ಞ ಶ್ರೀಪಾದ ಜೋಶಿ ಮಾತನಾಡಿ, ಕಷ್ಟಗಳು ಮನುಷ್ಯನ ಜೀವನದಲ್ಲಿ ಸರ್ವೇಸಾಮಾನ್ಯವಾಗಿರುತ್ತವೆ. ಕಷ್ಟ ಬಂದಾಗ ಕುಗ್ಗಬಾರದು ಸುಖ ಬಂದಾಗ ಹಿಗ್ಗಬಾರದು. ಕಷ್ಟಗಳು ನಮ್ಮ ಸಾಮರ್ಥ್ಯವನ್ನು ಹೊರ ತರುವ ಮಾರ್ಗಗಳಾಗಿವೆ ಎಂದರು.
ವಿಜಯಪುರದ ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದ ನರೇಶಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಯಾಗಿ ಜಾವೀದ್ ಜಮಾದಾರ, ಶಿವಾನಂದ ಕಲ್ಯಾಣ, ಪ್ರಾಚಾರ್ಯ ಜಿ.ಜೆ.ಹತ್ತಳ್ಳಿ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳಿದ್ದರು. ಪ್ರಕಾಶ ರಾಠೋಡ ಸ್ವಾಗತಿಸಿದರು. ಪರಮೇಶ್ವರ ರೊಟ್ಟಿ ನಿರೂಪಿಸಿದರು. ಗೀತಾ ಧನ್ಯಾಳ ವಂದಿಸಿದರು.