ವಿದ್ಯಾರ್ಥಿಗಳ ಭವಿಷ್ಯ ರೂಪಿಸಿಕೊಳ್ಳಲು ಎನ್‌ಎಸ್‌ಎಸ್ ಉತ್ತಮ ವೇದಿಕೆ: ಮಧುರ

fmcc nss sibira
Published on

ಮಡಿಕೇರಿ: ವಿದ್ಯಾರ್ಥಿಗಳ ಭವಿಷ್ಯ ರೂಪಿಸಿಕೊಳ್ಳಲು ರಾಷ್ಟ್ರೀಯ ಸೇವಾಯ ಯೋಜನೆ ಉತ್ತಮ ವೇದಿಕೆಯಾಗಿದೆ ಎಂದು ರಾಜ್ಯಮಟ್ಟದ ಅತ್ಯುತ್ತಮ ಎನ್.ಎಸ್.ಎಸ್ ಅಧಿಕಾರಿ ಪ್ರಶಸ್ತಿ ವಿಜೇತೆ ಹಾಗೂ ಸ್ನಾತಕೋತ್ತರ ವಿಭಾಗದ ಅರ್ಥಶಾಸ್ತ್ರ ಉಪನ್ಯಾಸಕಿ ಮಧುರ ಸಲಹೆ ಮಾಡಿದರು.


ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಸಂಭಾಂಗಣದಲ್ಲಿ ನಡೆದ ಕಾಲೇಜಿನ ೨೦೨೩-೨೪ನೇ ಸಾಲಿನ ರಾಷ್ಟ್ರೀಯ ಸೇವಾಯೋಜನೆಯ ವಾರ್ಷಿಕ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.


ರಾಷ್ಟ್ರೀಯ ಸೇವಾಯ ಯೋಜನೆ ವಿದ್ಯಾರ್ಥಿಗಳಿಗೆ ಸಾಕಷ್ಟು ವಿಚಾರಗಳನ್ನು ಮೈಗೂಡಿಸಿಕೊಳ್ಳಲು ಸಹಕಾರಿಯಾಗಿದೆ. ಜತೆಗೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿಕೊಳ್ಳಲು ರಾಷ್ಟ್ರೀಯ ಸೇವಾಯ ಯೋಜನೆ ಉತ್ತಮ ವೇದಿಕೆಯಾಗಿದೆ. ಯಾರು ಕೂಡ ಇದನ್ನು ಕೆಲಸವೆಂದು ಭಾವಿಸದೆ ಎನ್‌ಎಸ್‌ಎಸ್ ಸ್ವಯಂ ಸೇವಕರ ಸೇವೆ ಎಂಬುದನ್ನು ಅರಿತುಕೊಳ್ಳಬೇಕು ಎಂದರು.


ಎನ್‌ಎಸ್‌ಎಸ್ ಕ್ಯಾಂಪ್‌ನಲ್ಲಿ ಸಾಕಷ್ಟು ಅವಕಾಶವನ್ನು ಕಲ್ಪಿಸಿಕೊಡುತ್ತದೆ. ಜತೆಗೆ ರಾಷ್ಟ್ರಿಯ ಸೇವಾಯೋಜನೆಯಲ್ಲಿ ಮೊದಲು ನಾಯಕತ್ವ ಗುಣವನ್ನು ಬೆಳೆಸಿಕೊಡಲು ಸಾಧ್ಯ ಎಂದ ಅವರು, ವಿದ್ಯಾರ್ಥಿಗಳಿಗಳ ಸಾಧನೆ ಹಾಗೂ ಅವರ ಕಲೆ, ಪ್ರತಿಭೆ ಅನಾವರಣಕ್ಕೆ ಉತ್ತಮ ವೇದಿಕೆಯನ್ನು ಕಲ್ಪಿಸಿಕೊಡುತ್ತದೆ. ವಿದ್ಯಾರ್ಥಿಗಳು ಎನ್‌ಎಸ್‌ಎಸ್‌ನಲ್ಲಿ ಕಲಿತ ಗುಣಗಳನ್ನು ಜೀವನದಲ್ಲೂ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.


ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಪಾಂಶುಪಾಲ ಮೇಜರ್ ರಾಘವ ಮಾತನಾಡಿ, ಎಲ್ಲಿ ಹುಟ್ಟಬೇಕೆಂಬು ಮುಖ್ಯವಲ್ಲ. ಎಲ್ಲಿ ಮುಟ್ಟಬೇಕೆಂಬುದು ನಮ್ಮ ಗುರಿಯಾಗಿರಬೇಕು. ಅದನ್ನು ರಾಷ್ಟ್ರೀಯ ಸೇವಾಯೋಜನೆ ನಿಮಗೆ ತಿಳಿಸಿ ಕೊಡುತ್ತದೆ. ರಾಷ್ಟ್ರೀಯ ಸೇವಾ ಯೋಜನೆಯೆ ನಿಸ್ವಾರ್ಥ ಸೇವೆಯನ್ನು ಮೈಗೂಡಿಸಿಕೊಡುತ್ತದೆ. ಇದನ್ನು ವಿದ್ಯಾರ್ಥಿಗಳು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.


ಕೊಡಗು ವಿಶ್ವವಿದ್ಯಾಲಯ ಚಿಕ್ಕಅಳುವಾರ ಸಮಾಜಕಾರ್ಯ ಸ್ನಾತಕೋತ್ತರ ವಿಭಾಗದ ಉಪನ್ಯಾಸಕ ಮಂಜುನಾಥ್ ಮಾತನಾಡಿ, ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಸೇವಾಯೋಜನೆ ಗ್ರಾಮ ಜೀವನ, ಹೊಂದಾಣಿಕೆಯ ಜೀವನ ಹಾಗೂ ಸರಳ ಜೀವನದ ಮಹತ್ವವನ್ನು ತಿಳಿಸುತ್ತದೆ. ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಕಳೆಯುವ ದಿನಗಳು ಬಹಳ ಪ್ರಮುಖವಾದುದು. ನನಗಲ್ಲ ನಿನಗೆ ಎನ್ನುವ ಧ್ಯೇಯದೊಡನೆ ಸರ್ವರನ್ನೂ ಸಮಾನವಾಗಿ ಕಾಣುವ ಮನೋಭಾವವನ್ನು ಹುಟ್ಟುಹಾಕಲು ಸಾಧ್ಯವಾಗುತ್ತದೆ ಎಂದು ಹೇಳಿದರು.


ಪ್ರಸಕ್ತ ಸಾಲಿನಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು. ನಂತರ ನಡೆದ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ನೋಡುಗರ ಗಮನ ಸೆಳೆಯಿತು.


ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಡಾ.ಗಾಯತ್ರಿ, ಡಾ.ಮಹದೇವಯ್ಯ, ಶಿಬಿರಾಧಿಕಾರಿಗಳಾದ ಬಿ.ಜೈ.ಅಲೋಕ್, ಖುರ್ಷಿದಾ ಭಾನು, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ರಾಷ್ಟ್ರೀಯ ಸೇವಾಯೋಜನೆಯ ಹಿರಿಯ ನಾಯಕ, ನಾಯಕಿರು ಹಾಗೂ ಸ್ವಯಂ ಸೇವಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net