ಸಮಾಜದ ಅಭಿವೃದ್ಧಿಗೆ ಎನ್ಎಸ್ಎಸ್ ಪೂರಕ

29-Jaggu-10.jpg
Published on

ಬೆಳಗಾವಿ: ಸಮಾಜದ ಅಭಿವೃದ್ಧಿಗೆ ಎನ್‌ಎಸ್‌ಎಸ್‌ನಂತಹ ಕಾರ್ಯಕ್ರಮಗಳು ಪ್ರಾಮುಖ್ಯತೆ ಪಡೆದಿವೆ. ಕರ್ನಾಟಕ ರಾಜ್ಯವು  ಅತಿ ಹೆಚ್ಚು ಎನ್‌ಎಸ್‌ಎಸ್ ಸ್ವಯಂ ಸೇವಕರನ್ನು ಹೊಂದಿರುವ ರಾಜ್ಯವಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ರಾಜ್ಯ ಎನ್‌ಎಸ್‌ಎಸ್ ಕೋಶದ ಅಧಿಕಾರಿ ಡಾ. ಪ್ರತಾಪ ಲಿಂಗಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.
 ಬೆಳಗಾವಿ ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಆ್ಯಂಡ್ ರಿಸರ್ಚ್ ಎನ್‌ಎಸ್‌ಎಸ್ ಘಟಕ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ರಾಜ್ಯ ಎನ್‌ಎಸ್‌ಎಸ್ ಕೋಶದ ಸಹಯೋಗದೊಂದಿಗೆ ಕೆಎಲ್‌ಇ ಶತಮಾನೋತ್ಸವ ಕನ್ವೆನ್ಷನ್ ಸೆಂಟರ್‌ನ ಡಾ. ಬಿ.ಎಸ್. ಕೋಡ್ಕಣಿ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ‘ರಾಜ್ಯ ಯುವ ಉತ್ಸವ-2024’ ಉದ್ಘಾಟಿಸಿ ಅವರು ಮಾತನಾಡಿದರು.
 ಭಾರತವು ಅನೇಕ ಧರ್ಮಗಳು ಮತ್ತು ಭಾಷೆಗಳೊಂದಿಗೆ ಶ್ರೀಮಂತ ಸಂಸ್ಕೃತಿ ಹೊಂದಿದೆ. ಸಮಾಜದಲ್ಲಿ ಬದಲಾವಣೆಗಳನ್ನು ತರುವಲ್ಲಿ ಎಲ್ಲ ಗುಂಪುಗಳ ಜನರು ಒಟ್ಟಾಗಿ ಕೆಲಸ ಮಾಡುವ ಏಕೈಕ ವೇದಿಕೆ ಎನ್‌ಎಸ್‌ಎಸ್. ಕಾಹೆರ್ ಎನ್‌ಎಸ್‌ಎಸ್ ಘಟಕ ಉತ್ತಮ ಕಾರ್ಯ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
 ಕೆಎಲ್‌ಇ ವಿ.ಕೆ. ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್ ಪ್ರಾಚಾರ್ಯೆ ಡಾ ಅಲ್ಕಾ ಕಾಳೆ ಮಾತನಾಡಿ, ಎನ್‌ಎಸ್‌ಎಸ್ ಸಾಮಾಜಿಕ ಸಾಮರಸ್ಯ ಕಲಿಸಿಕೊಟ್ಟು, ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯರನ್ನಾಗಿ ಮಾಡುತ್ತದೆ ಮತ್ತು ಸಕಾರಾತ್ಮಕ ಭಾವನೆ ಮೂಡಿಸುತ್ತದೆ ಎಂದರು.
 ಕೆಎಲ್‌ಇ ಇನ್‌ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ಪ್ರಾಚಾರ್ಯ ಡಾ.ಸಂಜೀವ್‌ಕುಮಾರ ಮಾತನಾಡಿ, ಈ ಉತ್ಸವದ ವಿಷಯ ಆರೋಗ್ಯ ಮತ್ತು ಕ್ಷೇಮ, ಸಮಗ್ರ ವಿಧಾನವಾಗಿದೆ. ಎಲ್ಲ ಸ್ವಯಂ ಸೇವಕರು ಕೆಟ್ಟ ಅಭ್ಯಾಸಗಳಿಂದ ದೂರ ಇರಬೇಕು ಎಂದರು.
 ಉಪಕುಲಪತಿ ಡಾ ನಿತಿನ್ ಗಂಗನೆ ಮಾತನಾಡಿ, ಎನ್‌ಎಸ್‌ಎಸ್ ರಾಷ್ಟ್ರೀಯ ಏಕತೆ ಮತ್ತು ಏಕೀಕರಣವನ್ನು ಪ್ರತಿನಿಧಿಸುತ್ತದೆ. ನಾಯಕತ್ವದ ಗುಣ, ದೇಶಭಕ್ತಿ ಬೆಳೆಸುತ್ತದೆ ಎಂದರು. ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಡಾ. ಸಂತೋಷ ಮೆಟಗುಡ ಪರಿಚಯಿಸಿದರು. ಕಾಹೆರ್ ಕುಲಸಚಿವ ಡಾ.ಎಂ.ಎಸ್.ಗಣಾಚಾರಿ ಸ್ವಾಗತಿಸಿ, ಕಾಹೆರ್ ಎನ್‌ಎಸ್‌ಎಸ್ ಘಟಕದ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಿಸಿದರು.
 ಎನ್‌ಎಸ್‌ಎಸ್ ಸ್ವಯಂ ಸೇವಕರಾದ ಸ್ನೇಹಾ ಮತ್ತು ಯೋಗ್ಯಾ ನಿರೂಪಿಸಿದರು, ಸ್ಪೂರ್ತಿ ಆವಾಹನೆ ಎನ್‌ಎಸ್‌ಎಸ್ ಗೀತೆ ಹಾಡಿದರು. ಡಾ ಅಶ್ವಿನಿ ನರಸಣ್ಣನವರ ವಂದಿಸಿದರು. ಏ.27ರಿಂದ ಆರಂಭವಾಗಿರುವ ‘ರಾಜ್ಯ ಯುವ ಉತ್ಸವ-2024’ ಮೇ 1ರವರೆಗೆ ನಡೆಯಲಿದೆ. ಕರ್ನಾಟಕದಾದ್ಯಂತ 25 ವಿಶ್ವವಿದ್ಯಾಲಯಗಳಿಂದ ಸುಮಾರು 125 ಎನ್‌ಎಸ್‌ಎಸ್ ಸ್ವಯಂ ಸೇವಕರು ಉತ್ಸವದಲ್ಲಿ ಭಾಗವಹಿಸಿದ್ದಾರೆ.  ಸಮಾಜದ ಅಭಿವೃದ್ಧಿಗೆ ಎನ್‌ಎಸ್‌ಎಸ್‌ನಂತಹ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net