ಜಗತ್ತು ಗಾಂಧಿ ತತ್ವ ಅರಿಯುವುದು ಅಗತ್ಯ

7BK2
ಬಸವಕಲ್ಯಾಣದ ಎಸ್‌ಎಸ್ ಕೆ ಬಸವೇಶ್ವರ ಪದವಿ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ಎನ್ನೆಸ್ಸೆಸ್ ಸಂಸ್ಥಾಪನಾ ದಿನಾಚರಣೆಯಲ್ಲಿ ಡಾ.ಭೀಮಾಶಂಕರ ಬಿರಾದಾರ ಮಾತನಾಡಿದರು. ಡಾ.ಶಿವಕುಮಾರ ಪಾಟೀಲ್, ಪ್ರೊ.ವಿಠೋಬಾ ಡೊಣ್ಣೆಗೌಡರು, ಸುರೇಶ ಎಚ್.ಆರ್., ಮಹಾದೇವ ದೇಗಾಂವ ಇದ್ದರು.
Published on

ಬಸವಕಲ್ಯಾಣ: ಗಾಂಧಿ ತತ್ವದಲ್ಲಿ ಅಧಿಕಾರ, ಸಂಪತ್ತು, ಆಧುನಿಕ ನಾಗರಿಕತೆಗೆ ಸ್ಥಾನವಿಲ್ಲ. ಸತ್ಯ, ಅಹಿಂಸೆ, ತ್ಯಾಗ ಮತ್ತು ಶಾಂತಿ ಸಂದೇಶಗಳು ಗಾಂಧಿ ಚಿಂತನೆಯಲ್ಲಿ ಮಾನ್ಯತೆ ಪಡೆದಿವೆ. ಅಹಿಂಸೆ ಮತ್ತು ಯುದ್ಧ ವಿರೋಧದ ಗಾಂಧಿ ತತ್ವಗಳನ್ನು ಜಗತ್ತು ಅರಿಯುವ ತುರ್ತು ಈ ಕಾಲದಲ್ಲಿದೆ ಎಂದು ಶ್ರೀ ಬಸವೇಶ್ವರ ಪದವಿ ಕಾಲೇಜು ಪ್ರಾಧ್ಯಾಪಕ ಡಾ.ಭೀಮಾಶಂಕರ ಬಿರಾದಾರ ಹೇಳಿದರು.

ನಗರದ ಎಸ್‌ಎಸ್ ಕೆ ಬಸವೇಶ್ವರ ಪದವಿ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಗಾಂಧೀಜಿ ಹಳ್ಳಿಗಳ ಪುನರುಜ್ಜೀವನದ ಕನಸುಗಾರ. ಜ್ಞಾನದ ಜತೆಗೆ ಕಸುಬುಗಾರಿಕೆ, ಆರ್ಥಿಕ ಭದ್ರತೆಗೆ, ಸ್ವಾವಲಂಬನೆಗೆ ಆದ್ಯತೆ ನೀಡಿದ್ದರು ಎಂದರು.

ಸಾಮಾಜಿಕ ಹಾಗೂ ಆರ್ಥಿಕ ಸತ್ಯಗಳಿಗೂ ಸ್ವಾನುಭವಕ್ಕೂ ಇರುವ ಗಾಢವಾದ ಸಂಬಂಧವನ್ನು ಗಾಂಧಿ ಅವರ ಶೋಧನೆಯಲ್ಲಿ ಕಂಡು ಬರುತ್ತದೆ. ಗಾಂಧೀಜಿ ಚಿಂತನೆ ಹಾಗೂ ಗಾಂಧಿವಾದದಲ್ಲಿ ಬದುಕಿನ, ಸಮಾಜದ ಹಲವು ಹುಡುಕಾಟದ ನೆಲೆಗಳಿವೆ. ನೈತಿಕ ವಿಕಾಸವೆ ಬದುಕಿನ ಸಮಾಜದ ಬೆಳವಣಿಗೆಯಾಗಿ ಗಾಂಧೀಜಿ ಗ್ರಹಿಸಿದ್ದರು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜು ಐಕ್ಯೂಎಸಿ ಸಂಯೋಜಕ ಡಾ.ಶಿವಕುಮಾರ ಪಾಟೀಲ್ ಮಾತನಾಡಿ, ಎನ್ನೆಸ್ಸೆಸ್ ಶಿಸ್ತಿನ ದಾರಿಯಾಗಿದೆ. ಹಳ್ಳಿಗಳ ಸುಧಾರಣೆಯಿಂದಲೇ ದೇಶದ ಪ್ರಗತಿ ಸಾಧ್ಯ. ಅದರ ಸಣ್ಣ ಪ್ರಯತ್ನ ಎನ್ನೆಸ್ಸೆಸ್ ಘಟಕವಾಗಿದೆ. ಶಿಸ್ತು ವಿದ್ಯಾರ್ಥಿ ಜೀವನದ ಬಹು ದೊಡ್ಡ ಧೋರಣೆಯಾಗಿದೆ. ಬದುಕಿನ ಪ್ರತಿಯೊಂದರಲ್ಲೂ ಶಿಸ್ತು ಬದ್ಧತೆಯಿದ್ದರೆ ಜೀವನಕ್ಕೊಂದು ಅರ್ಥವಿದೆ ಎಂದರು.

ಎನ್ನೆಸ್ಸೆಸ್ ಅಧಿಕಾರಿ ಮಹಾದೇವ ದೇಗಾಂವ ಮಾತನಾಡಿದರು. ಎನ್ನೆಸ್ಸೆಸ್ ಸಂಯೋಜನಾಧಿಕಾರಿ ಡಾ.ಸುರೇಶ ಎಚ್.ಆರ್., ಪ್ರಾಧ್ಯಾಪಕ ಡಾ.ರಮೇಶ, ಗ್ರಂಥಪಾಲಕ ಸೂರ್ಯಕಾಂತ ನಾಸೆ, ದೀಪಕ ಕಾಡಾದಿ, ಶರಣಬಸವ ಮಠಪತಿ, ಭಾರತಿ ಮಠ, ಆಶ್ವಿನಿ, ವೈಶಾಲಿ, ಶಿಲ್ಪಾ ಬಿರಾದಾರ, ಕಲ್ಯಾಣಪ್ಪ ನಾವದಗಿ, ಭೀಮಾಶಂಕರ ಪೂಜಾರಿ, ಸಚಿನ್ ರಾಠೋಡ್, ಸುಮನ ರೆಡ್ಡಿ ಇದ್ದರು. ಮೀನಾಕ್ಷಿ ಸ್ವಾಗತಿಸಿದರು. ಪ್ರೊ.ವಿಠೋಬಾ ಡೊಣ್ಣೆಗೌಡರು ವಂದಿಸಿದರು. ನೇತ್ರಾ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net