

ಕಿಕ್ಕೇರಿ: ಇಲ್ಲಿನ ಸರ್ಕಾರಿ ಪಿಯು ಕಾಲೇಜಿನ ಎನ್‌ಎಸ್‌ಎಸ್ ಘಟಕದ ಶಿಬಿರಾರ್ಥಿಗಳು ಬುಧವಾರ ಶ್ರಮದಾನದ ಮೂಲಕ ಇತಿಹಾಸ ಪ್ರಸಿದ್ಧ ಹೊಯ್ಸಳರ ಕಾಲದ ಬ್ರಹ್ಮೇಶ್ವರ ದೇಗುಲ ಆವರಣ ಶುಚಿಗೊಳಿಸಿದರು.
40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಇಡೀ ದೇಗುಲ ಆವರಣದಲ್ಲಿ ಬೆಳೆದಿದ್ದ ಗಿಡಗಂಡಿ, ಕಸಕಡ್ಡಿ ತರವುಗೊಳಿಸಿದರು.
ಎನ್‌ಎಸ್‌ಎಸ್ ಘಟಕಾಧಿಕಾರಿ ಕುಮಾರಸ್ವಾಮಿ ಮಾತನಾಡಿ, ಸನಾತನ ಸಂಸ್ಕೃತಿ, ಪರಂಪರೆ ಉಳಿಸಲು ವಿದ್ಯಾರ್ಥಿಗಳು ಕಲಿಕೆಯೊಂದಿಗೆ ಶ್ರಮದಾನ ಮಾಡುತ್ತಿದ್ದಾರೆ. ಬಿಡುವಿನ ವೇಳೆಯಲ್ಲಿ ಇಂತಹ ಶ್ರಮದಾನ ಮಾಡುತ್ತಿದ್ದು, ಮಕ್ಕಳಲ್ಲಿ ನಾಯಕತ್ವ, ಒಗ್ಗಟ್ಟು, ಸಮುದಾಯದ ಆರೋಗ್ಯಕ್ಕಾಗಿ ಅಳಿಲು ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಅಂತಿಮವಾಗಿ ದೇಗುಲದ ಬ್ರಹ್ಮೇಶ್ವರ, ಕಾಲಭೈರವೇಶ್ವರ, ಪಾರ್ವತಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ತೀರ್ಥ-ಪ್ರಸಾದ ಸ್ವೀಕರಿಸಿ ಉತ್ತಮ ಶಿಕ್ಷಣ ಭವಿಷ್ಯಕ್ಕೆ ಪ್ರಾರ್ಥಿಸಿದರು.
ಪ್ರಾಂಶುಪಾಲ ಎನ್.ದೊರೆಸ್ವಾಮಿ, ಎನ್‌ಎಸ್‌ಎಸ್ ಘಟಕಾಧಿಕಾರಿ ಜಿ.ಎಸ್. ಕುಮಾರಸ್ವಾಮಿ, ಉಪನ್ಯಾಸಕರಾದ ಎನ್.ರವೀಂದ್ರ, ಎ.ಎಂ.ಮಂಜುನಾಥ್, ನಾಗೇಶ, ರಮೇಶ್, ಜಿ.ವಿನಾಯಕ, ಅರ್ಚಕ ಆದಿತ್ಯ ಭಾರದ್ವಾಜ್ ಇದ್ದರು.