

ವಿರಾಜಪೇಟೆ: ಉತ್ತಮ ಜೀವನ ರೂಪಿಸುವುದರೊಂದಿಗೆ ವಿದ್ಯಾರ್ಥಿಗಳಲ್ಲಿರುವ ವಿಶೇಷ ಗುಣಗಳ ಪ್ರದರ್ಶನಕ್ಕೆ ಎನ್ನೆಸ್ಸೆಸ್ ಶಿಬಿರ ಅತ್ಯುತ್ತಮ ವೇದಿಕೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನೆಲ್ಲಚಂಡ ಕಿರಣ್ ಕಾರ್ಯಪ್ಪ ಅಭಿಪ್ರಾಯಪಟ್ಟರು.
ಕಾವೇರಿ ಕಾಲೇಜಿನ ಎನ್ನೆಸ್ಸೆಸ್ ಘಟಕ ವತಿಯಿಂದ ಅರಪಟ್ಟು ಕಡಂಗದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಜೀವನದಲ್ಲಿ ಹೆಚ್ಚಿನ ವಿಚಾರಗಳನ್ನು ಕಲಿಯಲು ಹಾಗೂ ಕಲಿತ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಶಿಬಿರಗಳು ಉತ್ತಮ ವೇದಿಕೆಯಾಗಿದೆ. ಇದು ವಿದ್ಯಾರ್ಥಿ ಗಳಲ್ಲಿ ನಾಯಕತ್ವ ಗುಣ, ಸಹಕಾರ, ಸೌಹಾರ್ದ ಮನೋಭಾವನೆಯನ್ನು ಬೆಳೆಸುತ್ತದೆ ಎಂದು ಹೇಳಿದರು.
ವಿವಿಧ ಕಲೆ, ಹವ್ಯಾಸಗಳನ್ನು ತೋರ್ಪಡಿಸಲು ಇದೊಂದು ಉತ್ತಮ ವೇದಿಕೆ. ಪ್ರತಿ ವ್ಯಕ್ತಿಯನ್ನು ಬಾಲ್ಯದಲ್ಲಿ ಆತನ ಪಾಲಕರ ಹೆಸರಿನ ಮೂಲಕ ಗುರುತಿಸುತ್ತಾರೆ. ಅದೇ ವ್ಯಕ್ತಿ ಯೌವನ ತಲುಪಿದ ಸಂದರ್ಭದಲ್ಲಿ ಆತ ಮಾಡಿದ ಸಾಧನೆಯಿಂದ ಆತನ ಹೆಸರಿನ ಮೂಲಕ ಪಾಲಕರನ್ನು ಗುರುತಿಸುವಂತಾಗುತ್ತದೆ. ಹಣ, ಆರೋಗ್ಯ ಕಳೆದು ಹೋದರೆ ಮತ್ತೆ ಸಂಪಾದಿಸಬಹುದು. ಆದರೆ ನಡತೆ ಕಳೆದುಕೊಂಡರೆ ಮತ್ತೆ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಗುರು-ಹಿರಿಯರು, ಪಾಲಕರ ಮಾರ್ಗದಲ್ಲಿ ಚಲಿಸಿ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಿ ಎಂದಿ ಸಲಹೆ ನೀಡಿದರು.
ಸಮಾಜ ಸೇವಕ ಕೋಡಿರ ಪೊನ್ನು ಮಂದಣ್ಣ ಮಾತನಾಡಿ, ವಿದ್ಯಾರ್ಥಿಗಳು ಸಮಾಜದಲ್ಲಿ ಗೌರವಾನ್ವಿತರಾಗಿ ಬಾಳಬೇಕು. ಒಳ್ಳೆಯ ಉದಾತ ಚಿಂತಕರ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡು ಸ್ವಸ್ಥ ಸಮಾಜ ನಿರ್ಮಾಣದ ನಿರ್ಮಾತೃಗಳಾಗಬೇಕು ಎಂದರು.
ನಿವೃತ್ತ ಮುಖ್ಯ ಶಿಕ್ಷಕ ಅನ್ನಂಬೀರ ಬಾಲಕೃಷ್ಣ ಮಾತನಾಡಿ, ವಿದ್ಯಾರ್ಥಿಗಳು ಈ ಹಂತದಲ್ಲಿ ಸಮಾಜದಲ್ಲಿರುವ ವಿವಿಧ ಸಮಸ್ಯೆ ಹಾಗೂ ಸಾಮಾಜಿಕ ಪಿಡುಗುಗಳನ್ನು ನಿವಾರಿಸಲು ಸಹಕರಿಸಬೇಕು. ಭವಿಷ್ಯದಲ್ಲಿ ಸಮಾಜ ಸೇವಕರಾಗಿ ದುಶ್ಚಟಗಳಿಂದ ದೂರವಿದ್ದು, ಉತ್ತಮ ಭವಿಷ್ಯ ಕಂಡುಕೊಳ್ಳುವುದರೊಂದಿಗೆ ಸಮಾಜದ ಚಿಂತಕರಾಗಿ ಬೆಳೆಯಬೇಕು ಎಂದು ಹೇಳಿದರು.
ಜೀವನದಲ್ಲಿ ಸೇವೆ ಮಾಡಲು ಸಿಗುವ ಎಲ್ಲ ಅವಕಾಶವನ್ನು ಸರಿಯಾದ ರೀತಿ ಬಳಸಿಕೊಳ್ಳಬೇಕು. ಮೊಬೈಲ್, ಟಿವಿಗಳಂತಹ ಎಲೆಕ್ಟ್ರಾನಿಕ್ ಮಾಧ್ಯಮಗಳಿಂದ ದೂರವಿದ್ದು, ಪುಸ್ತಕಗಳನ್ನು ಹೆಚ್ಚಾಗಿ ಬಳಸುವ ಹವ್ಯಾಸವನ್ನು ರೂಪಿಸಿಕೊಳ್ಳಬೇಕು ಎಂದು ಪಾಂಡಣ್ಣ ಚಂಗಪ್ಪ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾವೇರಿ ಎಜುಕೇಷನ್ ಸೊಸೈಟಿ ನಿರ್ದೇಶಕ ಪುಚ್ಚಿಮಾಡ ಸುಬ್ಬಯ್ಯ, ವಿದ್ಯಾರ್ಥಿಗಳು ಉತ್ತಮ ಸಮಾಜದ ನಿರ್ಮಾತೃಗಳಾಗಬೇಕು ಎಂದು ತಿಳಿಸಿದರು.
ಅರಪಟ್ಟು ಕಡಂಗದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಭಾರ ಮುಖ್ಯ ಶಿಕ್ಷಲಿ ವಿಮಲಾ, ಪ್ರಾಂಶುಪಾಲ ಬೆನೆಡಿಕ್ಟ್ ಆರ್.ಸಲ್ದಾನ ಮಾತನಾಡಿದರು. ಎನ್ನೆಸ್ಸೆಸ್ ಯೋಜನಾಧಿಕಾರಿ ಸುನಿಲ್ ಕುಮಾರ್, ಉಪನ್ಯಾಸಕರಾದ ನಿರ್ಮಿತಾ ಇತರರು ಇದ್ದರು.