

ಮೇಲುಕೋಟೆ: ಜಾತಿ, ಮತ, ಧರ್ಮಕ್ಕಿಂತಲೂ ಮಿಗಿಲಾದ ಸಮಾಜಸೇವೆಯ ಮಹತ್ವವನ್ನು ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಿಗೆ ಕಲಿಸಿಕೊಡುತ್ತದೆ ಎಂದು ಪಾಂಡವಪುರ ವಿದ್ಯಾಪ್ರಚಾರ ಸಂಘದ ಗೌರವ ಕಾರ್ಯದರ್ಶಿ ಕೆ.ವಿ. ಬಸವರಾಜು ತಿಳಿಸಿದರು.
ಮೇಲುಕೋಟೆಯಲ್ಲಿ ವಿಜಯ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಇತ್ತೀಚಿಗೆ ಹಮ್ಮಿಕೊಂಡಿರುವ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಮಾತನಾಡಿದರು.
ಯಾವುದೇ ಪ್ರತಿಫಲಾಪೇಕ್ಷೆ ಹಾಗೂ ಭೇದ-ಭಾವವಿಲ್ಲದೆ ಸಮಾಜಸೇವೆ ಮಾಡಬೇಕೆಂಬುದನ್ನು ಎನ್.ಎಸ್.ಎಸ್. ಶಿಬಿರ ಕಲಿಸಿಕೊಡುತ್ತದೆ. ಮೇಲುಕೋಟೆ ರಾಮಾನುಜಾಚಾರ್ಯರ ಕರ್ಮಭೂಮಿಯಾಗಿದ್ದು, ಇಲ್ಲಿನ ಸ್ಮಾರಕಗಳು ಮತ್ತು ಕೊಳಗಳು, ದೇವಾಲಯಗಳ ಸುತ್ತಮುತ್ತ ಸ್ವಚ್ಛಗೊಳಿಸಿ ಪರಿಸರ ಜಾಗೃತಿ ಮೂಡಿಸುವ ಕಾರ್ಯವನ್ನು ವಿದ್ಯಾಪ್ರಚಾರ ಸಂಘದ ರಾಷ್ಟ್ರೀಯ ಸೇವಾ ಯೋಜನೆಯ ಘಟಕ ಪ್ರತಿವರ್ಷ ಮಾಡಿಕೊಂಡು ಬಂದಿದೆ. ನಿಸ್ವಾರ್ಥ ಮನೋಭಾವದಿಂದ ಮಾಡುವ ಸೇವಾ ಕಾರ್ಯ ಯಶಸ್ವಿಯಾಗುತ್ತದೆ. ಇದರಿಂದ ಹತ್ತು ಹಲವು ಮಂದಿಗೆ ಸಹಾಯವಾಗಿ ದಾರಿದೀಪವಾಗುತ್ತಿದೆ ಎಂದು ಹೇಳಿದರು.
ಪಾಂಡವಪುರದಲ್ಲಿ ವಿದ್ಯಾಪ್ರಚಾರ ಸಂಘ ಸ್ಥಾಪಿಸಿದ ಶಾಲಾ, ಕಾಲೇಜಿನಲ್ಲಿ ಲಕ್ಷಾಂತರ ಮಂದಿ ವ್ಯಾಸಂಗ ಮಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಬಡ ಮಕ್ಕಳ ಶಿಕ್ಷಣಕ್ಕೆ ಆಶಾದೀಪವಾಗಬೇಕೆಂಬ ಹಂಬಲದಿಂದ ಆರಂಭವಾದ ಸಂಸ್ಥೆ 75 ವಸಂತಗಳನ್ನು ಪೂರೈಸಿ ಸೇವೆ ಮಾಡುತ್ತಾ ಬಂದಿದೆ. ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಪ್ರತಿ ವಿದ್ಯಾರ್ಥಿಯೂ ನಿಸ್ವಾರ್ಥವಾದ ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂಬುದೇ ಸಂಸ್ಥೆಯ ಆಶಯವಾಗಿದೆ ಎಂದರು.
ಶಿಬಿರಾಧಿಕಾರಿ ಡಾ.ಎನ್.ಕೆ ವೆಂಕಟೇಗೌಡ ಮಾತನಾಡಿ, ಮೇಲುಕೋಟೆ ಮಳೆ ನೀರು ಕೊಯ್ಲಿಗೆ ರಾಜ್ಯದಲ್ಲೇ ಮಾದರಿಯಾದ ಸ್ಥಳ. ಇಲ್ಲಿನ ಕಲ್ಯಾಣಿಗಳು, ಮಂಟಪಗಳು, ದೇವಾಲಯಗಳು ದಿನನಿತ್ಯ ಸಹಸ್ರಾರು ಭಕ್ತರನ್ನು ಆಕರ್ಷಿಸುತ್ತವೆ. ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರದ ವೇಳೆ ಸ್ಮಾರಕಗಳು, ಕಲ್ಯಾಣಿ, ಅನ್ನದಾನ ಭವನದ ಸುತ್ತಮುತ್ತ ಹಾಗೂ ಶತಮಾನದ ಶಾಲೆಯ ಆವರಣವನ್ನು ಸ್ವಚ್ಛ ಮಾಡಲು ಯೋಜಿಸಿದ್ದೇವೆ. ಶಿಬಿರ ಮೇ 29ರವರೆಗೆ ನಡೆಯಲಿದ್ದು, ಶಿಬಿರಾರ್ಥಿಗಳು ಸೇವಾ ಮನೋಭಾವನೆಯಿಂದ ಕಾರ್ಯಚಟುವಟಿಕೆಯಲ್ಲಿ ಭಾಗಿಯಾಗಬೇಕು ಎಂದರು.
ಎನ್.ಎಸ್.ಎಸ್ ಶಿಬಿರವನ್ನು ಮೇಲುಕೋಟೆ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ಉದ್ಘಾಟಿಸಿದರು. ವಿಜಯ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಕೃಷ್ಣಮೂರ್ತಿ, ಪದವಿಪೂರ್ವಕಾಲೇಜಿನ ಪ್ರಾಂಶುಪಾಲ ಉಮೇಶ್, ಉಪಪ್ರಾಂಶುಪಾಲ ರಮೇಶ್, ಖಜಾಂಚಿ ರಾಮೇಗೌಡ, ಮೇಲುಕೋಟೆ ಬಾಲಕರ ಶಾಲೆಯ ಮುಖ್ಯಶಿಕ್ಷಕ ಸಂತಾನರಾಮನ್, ನಿವೃತ್ತ ಮುಖ್ಯಶಿಕ್ಷಕ ಅಣ್ಣೇಗೌಡ ಮತ್ತಿತರರು ಭಾಗವಹಿಸಿದ್ದರು.