ಎನ್‌ಎಸ್‌ಎಸ್ ಶಿಬಿರ ಒಗ್ಗಟ್ಟಿನ ಸಂಕೇತ

11kkr5( 3-25 nss hirikalale
ಕಿಕ್ಕೇರಿ ಸಮೀಪದ ಹಿರಿಕಳಲೆಯಲ್ಲಿ ಜರುಗಿದ ಸರ್ಕಾರಿ ಮಹಿಳಾ ಪದವಿಪೂರ್ವ ಕಾಲೇಜಿನ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ಗೋವು ಪೂಜೆ ಮಾಡಲಾಯಿತು. ನಾಗಣ್ಣ, ರವಿಶಂಕರ್, ಡಾ. ಪ್ರತಿಮಾ, ಆರ್. ಜಗದೀಶ್, ಕೆ.ಆರ್. ನೀಲಕಂಠ ಮತ್ತಿತರರಿದ್ದರು.
Published on

ಕಿಕ್ಕೇರಿ: ಒಗ್ಗಟ್ಟು, ಸಾಮರಸ್ಯ ಬೆಸೆಯಲು ರಾಷ್ಟ್ರೀಯ ಸೇವಾ ಯೋಜನೆ ಶಿಬಿರ ನೆರವಾಗಲಿದ್ದು, ವಿದ್ಯಾರ್ಥಿಗಳು ಸೇವಾ ಮನೋಭಾವ, ಪರೋಪಕಾರ ಗುಣ ಬೆಳೆಸಿಕೊಳ್ಳಬೇಕು ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಸಾರಂಗಿ ನಾಗಣ್ಣ ಹೇಳಿದರು.

ಸಮೀಪದ ಹಿರೀಕಳಲೆ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಕೆ.ಆರ್. ಪೇಟೆ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಶಿಬಿರದಲ್ಲಿ ಮಾತನಾಡಿ, ಅನ್ನದಾತ ರೈತನಾಗಿದ್ದು, ಕೃಷಿ ಪರಿಕರಗಳಾದ ರಾಸು, ನೇಗಿಲು, ನೊಗ ಎಲ್ಲವನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸು ಇಂದಿಗೂ ನನಸಾಗಿಲ್ಲ. ಗ್ರಾಮೀಣ ಜನರ ಆರ್ಥಿಕ ಮಟ್ಟ ಇಂದಿಗೂ ಸುಧಾರಿಸಿಲ್ಲ. ಜನರಿಗೆ ಸಿಗಬೇಕಾದ ಶುದ್ಧ ಕುಡಿಯುವ ನೀರು, ರಸ್ತೆಗಳು, ಚರಂಡಿ, ಗುಣಮಟ್ಟದ ವಿದ್ಯುತ್ ಸೇರಿದಂತೆ ಕನಿಷ್ಠ ಮೂಲ ಸೌಲಭ್ಯಗಳನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಸರ್ಕಾರಗಳು ಬದ್ಧತೆಯಿಂದ ಕೆಲಸ ಮಾಡುತ್ತಿಲ್ಲ ಎಂದು ವಿಷಾಧಿಸಿದರು.

ವಕೀಲ ಎನ್.ಆರ್.ರವಿಶಂಕರ್ ಮಾತನಾಡಿ, ಮಹಿಳೆಯರು ಜಾಗೃತರಾಗಿ ತಮ್ಮ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯನ್ನು ಗಟ್ಟಿ ಧ್ವನಿಯಲ್ಲಿ ಪ್ರತಿಭಟಿಸಬೇಕು. ಲೈಂಗಿಕ ದೌರ್ಜನ್ಯ, ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಶೋಷಣೆ ಸೇರಿದಂತೆ ಯಾವುದೇ ಕಾನೂನು ಬದ್ಧವಾದ ಕೆಲಸ ಕಾರ್ಯಗಳು ನಿಗದಿತ ಸಮಯದಲ್ಲಿ ಆಗದಿದ್ದಾಗ ಕಾನೂನಿನ ನೆರವು ಪಡೆದುಕೊಂಡು ನೆಮ್ಮದಿಯ ಜೀವನ ನಡೆಸುವಂತೆ ತಿಳಿಸಿದರು.

ಅಗ್ನಿಶಾಮಕ ಠಾಣೆಯ ಅಧಿಕಾರಿ ಚಂದ್ರಶೇಖರ್ ಮಾತನಾಡಿ, ಅಗ್ನಿ ಅವಘಡಗಳನ್ನು ತಡೆಯುವ ಕ್ರಮ, ಬೆಂಕಿಯನ್ನು ನಂದಿಸಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿದರು. ಪ್ರಾಂಶುಪಾಲೆ ಡಾ.ಪ್ರತಿಮಾ, ಮಂಡ್ಯ ಜಿಲ್ಲಾ ನಾಯಕ ಸಮಾಜದ ಅಧ್ಯಕ್ಷ ಆರ್.ಜಗದೀಶ್, ಮುಖಂಡ ನಾಗರಾಜು, ಪುಟ್ಟರಾಜು, ಕೃಷ್ಣ, ದಿಲೀಪ್, ಪುರಸಭೆ ಮಾಜಿ ಸದಸ್ಯ ಕೆ.ಆರ್.ನೀಲಕಂಠ, ಅಧ್ಯಾಪಕರಾದ ಚೇತನ್ ಕುಮಾರ್, ದೀಪಶ್ರೀ, ಸಹ ಶಿಬಿರಾಧಿಕಾರಿ ಚಂದ್ರು, ವಿಶ್ವಾರಾಧ್ಯ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net