

ಮಂಡ್ಯ: ಮಹಾತ್ಮ ಗಾಂಧೀಜಿ ಅವರ ಕನಸಿನ ಭಾರತ ನಿರ್ಮಾಣವಾಗಲು ಎನ್‌ಎಸ್‌ಎಸ್‌ನಿಂದ ಮಾತ್ರ ಸಾಧ್ಯ ಎಂದು ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ಡಾ.ಕೆಂಪಮ್ಮ ಅಭಿಪ್ರಾಯಟ್ಟರು.
ತಾಲೂಕಿನ ಬಿ.ಹೊಸೂರು ಕಾಲನಿಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದಲ್ಲಿ ಮಾತನಾಡಿದ ಅವರು, ಸೇವೆಯ ಮೂಲಕ ಶಿಕ್ಷಣ ನೀಡುವ ಎನ್‌ಎಸ್‌ಎಸ್ ಬಾಂಧವ್ಯವನ್ನು ವೃದ್ಧಿಸುತ್ತದೆ. ಗ್ರಾಮೀಣ ಸಮಾಜದ ಜನರ ಬದುಕಿನ ವಾಸ್ತವವನ್ನು ಅರಿತುಕೊಂಡು ಸಮಾಜಮುಖಿಯಾಗಿ ಚಿಂತಿಸಲು ನಿರ್ದೇಶಿಸುತ್ತದೆ. ಒಬ್ಬ ವಿದ್ಯಾರ್ಥಿಯ ಸಮಗ್ರ ವ್ಯಕ್ತಿತ್ವವನ್ನು ರೂಪಿಸುವಲ್ಲಿ, ಉತ್ತಮ ನಾಗರೀಕನನ್ನಾಗಿ ಮಾಡುವಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಪಾತ್ರ ಮಹತ್ತರವಾದದ್ದು ಎಂದರು.
ಎನ್‌ಎಸ್‌ಎಸ್ ಶಿಬಿರಗಳು ಪ್ರತಿ ವಿದ್ಯಾರ್ಥಿಯಲ್ಲಿಯೂ ಸಮಯಪ್ರಜ್ಞೆ, ಬದ್ಧತೆ, ಆಲೋಚನಾ ಶಕ್ತಿ, ಸಾಮಾಜಿಕ ಕಳಕಳಿ, ಆತ್ಮಸ್ಥೈರ್ಯ ಮೊದಲಾದ ಮೌಲ್ಯಗಳನ್ನು ತಿಳಿಸಿಕೊಡುವ ಉತ್ತಮ ವೇದಿಕೆ. ಪ್ರಸ್ತುತ ಸಮಾಜದಲ್ಲಿ ಸ್ವಾರ್ಥ ಮನಸ್ಸುಳ್ಳವರೆ ತುಂಬಿದ್ದಾರೆ. ಹಿರಿಯರು ತಮ್ಮ ಸ್ವಾರ್ಥಕೋಸ್ಕರ ಬದುಕನ್ನು ಮಾಡಿಕೊಂಡಿದ್ದರೆ, ನಾವಿಂದು ನೆಮ್ಮದಿಯಾಗಿ ಬದುಕಲು ಸಾಧ್ಯವಾಗುತ್ತಿರಲಿಲ್ಲ. ಎನ್‌ಎಸ್‌ಎಸ್‌ನಲ್ಲಿ ಕಸ ಗುಡಿಸುವುದಕ್ಕೆ ಹೋಗುತ್ತಾರೆ ಎಂಬುವುದು ಹಲವರ ಭಾವನೆ. ಅದು ಭೌತಿಕ ಕಸವಲ್ಲ, ಮಾನಸಿಕ ಕಸ. ಅಂದರೆ ನಿಮ್ಮ ಮನಸ್ಸಿನಲ್ಲಿ ಇರುವ ಕೆಟ್ಟ ಆಲೋಚನೆಯನ್ನು ತೆಗೆಯಲಿದೆ. ಸ್ವಾಮಿ ವಿವೇಕಾನಂದರ ಮಾತಿಗೆ ಎಷ್ಟೋ ಜನರು ತಮ್ಮ ಜೀವನದಲ್ಲಿ ಬದಲಾವಣೆಯನ್ನು ತಂದು ಅತ್ಯುತ್ತಮ ಸ್ಥಾನದಲ್ಲಿದ್ದಾರೆ. ಒಂದು ದೇಶದ ಸಂಪತ್ತು ಅಳೆಯುವುದು ಚಿನ್ನ ಬೆಳ್ಳಿ ಅಲ್ಲ. ಬದಲಿಗೆ ಚಿನ್ನದಂತಹ ವ್ಯಕ್ತಿಗಳಿಂದ. ಆ ಚಿನ್ನದಂತಹ ವ್ಯಕ್ತಿಗಳನ್ನು ತಯಾರು ಮಾಡುವ ಶಕ್ತಿ ಎನ್‌ಎಸ್‌ಎಸ್‌ಗಿದೆ ಎಂದರು.
ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಡಾ.ಗೀತಾಮಣಿ, ಅಕ್ಕಮಹಾದೇವಿ ಮಹಿಳಾ ವಿವಿಯ ಮಂಡ್ಯ ಘಟಕದ ಸಂಯೋಜಕ ಡಾ.ಜಿ.ಕಿರಣ್ ಇತರರಿದ್ದರು. ಇದೇ ಸಂದರ್ಭದಲ್ಲಿ ಗಿಡಗಳನ್ನು ನೆಟ್ಟು, ಗ್ರಾಮಸ್ಥರಿಗೂ ಗಿಡಗಳನ್ನು ವಿತರಿಸಲಾಯಿತು.