

ನಾಗಮಂಗಲ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಗ್ರಾಮಪರಿಕಲ್ಪನೆಯ ಕನಸು ರಾಷ್ಟ್ರೀಯ ಸೇವಾ ಯೋಜನೆಗಳ ಶಿಬಿರದ ಹೆಜ್ಜೆ ಗುರುತಾಗಿ ರೂಪಿಗೊಂಡಿದೆ ಎಂದು ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಕಾರ್ಯನಿರ್ವಹಣಾಧಿಕಾರಿ ರಾಮೇಗೌಡ ಹೇಳಿದರು.
ತಾಲೂಕಿನ ದೇವಲಾಪುರ ಹೋಬಳಿ ಚೌದರಿಕೊಪ್ಪಲು ಗ್ರಾಮದಲ್ಲಿ ಆದಿಚುಂಚನಗಿರಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು, ಡಾ.ಹೂ.ಶ್ರೀನಿವಾಸಯ್ಯ ಚಾರಿಟೇಬಲ್ ಟ್ರಸ್ಟ್, ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಗಾಂಧಿಭವನ ಬೆಂಗಳೂರು ಹಾಗೂ ಚೌದ್ರಿ ಗ್ರಾಮ ಅಭಿವೃದ್ಧಿ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಮಹಾತ್ಮ ಗಾಂಧೀಜಿ ಅವರ ಮಾರ್ಗದರ್ಶನ ಗಾಂಧಿ ಹೆಜ್ಜೆಯ ಗುರುತಾಗಿ ಹಾಗೂ ಅವರ ಚಿಂತನೆಗಳನ್ನು ಇದೇ ಗ್ರಾಮದ ಶ್ರೀನಿವಾಸಯ್ಯ ಅವರು ಪ್ರಚಾರ ಮಾಡಿರುವ ಹೆಗ್ಗಳಿಕೆ ಹೊಂದಿದ್ದಾರೆ. ಇಂತಹ ನೆಲದಲ್ಲಿ ಸೇವಾ ಮನೋಭಾವ ಬೆಳೆಸಿಕೊಳ್ಳುವ ಹಾಗೂ ಶಿಬಿರದ ಹೆಜ್ಜೆ ಗುರುತು ಮುಂದಿನ ಯುವ ಪೀಳಿಗೆ ಗಾಂಧಿ ಮಾರ್ಗದಂತೆ ಮಾದರಿಯಾಗಬೇಕೆಂಬುದು ನಮ್ಮಗಳ ಆಶಯವಾಗಿದೆ ಎಂದರು.
ವಿದ್ಯಾರ್ಥಿಗಳು ಕೇವಲ ಕಾಲೇಜು ವ್ಯಾಸಂಗದಲ್ಲಿ ಮಾತ್ರ ಇರಬಾರದು. ಬದಲಿಗೆ ಇಂತಹ ಶಿಬಿರದ ಪಾಲ್ಗೊಳ್ಳುವಿಕೆ ಪ್ರಮುಖವಾಗಿರುತ್ತದೆ. ಜತೆಗೆ ತಮ್ಮ ಗ್ರಾಮದಲ್ಲಿ ತಮ್ಮವರು ಒಡಗೂಡಿ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರಾಗಿ ಸೇವಾಕಾರ್ಯಕ್ರಮ ಮಾಡಬೇಕು ಎಂದು ಸಲಹೆ ನೀಡಿದರು.
ಸಾನಿಧ್ಯ ವಹಿಸಿದ ಸತ್ಯಕೀರ್ತಿನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ಗಾಂಧಿ ಸ್ಮಾರಕ ನಿಧಿಯ ಕಾರ್ಯಾಧ್ಯಕ್ಷ ವಿಶುಕುಮಾರ್ ಸಮಾರೋಪ ಭಾಷಣ ಮಾಡಿದರು. ಗಾಂಧಿ ಸ್ಮಾರಕ ನಿಧಿಯ ಗೌರವ ಕಾರ್ಯದರ್ಶಿ ಎಂ.ಸಿ.ನರೇಂದ್ರ, ಡಾ.ಹೂ.ಶ್ರೀನಿವಾಸಯ್ಯ ಚಾರಿಟೇಬಲ್ ಟ್ರಸ್ಟ್‌ನ ಕಾರ್ಯದರ್ಶಿ ನರಸಿಂಹಮೂರ್ತಿ, ಗಾಂಧಿಭವನ ನಿರ್ದೇಶಕ ಪ್ರೊ.ಜಿ.ಬಿ.ಶಿವರಾಜು, ಡಾ.ಎಚ್.ಎಸ್.ರವೀಂದ್ರ, ಕೆ.ಬಿ.ಮಂಜುನಾಥ್, ಮೋಹನ್‌ಕುಮಾರ್ ನಾಯ್ಕ, ಆರ್.ಮೋಹನ್‌ಕುಮಾರ್, ಟಿ.ಆರ್.ಹರೀಶ್, ದರ್ಶನ್ ಇತರರಿದ್ದರು.