

ಮಡಿಕೇರಿ:
ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯದಲ್ಲಿ ಕಳೆದ ಏಳು ದಿನಗಳಿಂದ ನಡೆಯುತ್ತಿದ್ದ ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಕೊಡಗು ವಿಶ್ವವಿದ್ಯಾನಿಲಯ ಸಂಯೋಜಿತ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ೨೦೨೩-೨೪ ನೇ ಸಾಲಿನ ಎನ್.ಎಸ್.ಎಸ್ ಘಟಕಗಳ ವಿಶೇಷ ವಾರ್ಷಿಕ ಶಿಬಿರದ ಸಮಾರೋಪ ಕಾರ್ಯಕ್ರಮ ಶುಕ್ರವಾರ ನಡೆಯಿತು.
ಎನ್‌ಎಸ್‌ಎಸ್ ವಿಶೇಷ ಶಿಬಿರದ ಕೊನೆಯ ದಿನದ ಕಾರ್ಯಕ್ರಮವಾಗಿ ನಡೆದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಜವಾಹರ್ ನವೋದಯ ವಿದ್ಯಾಲಯದ ಪ್ರಾಂಶುಪಾಲ ಓ.ಎಂ. ಪಂಕಜಾಕ್ಷನ್, ಉಪ ಪ್ರಾಂಶುಪಾಲೆ ಶೋಭಾಮಣಿ, ಮತ್ತು ಗಾಳಿಬೀಡು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಶಿಕಿರಣ್ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಮೇ.ಪ್ರೊ. ಬಿ.ರಾಘವ ವಹಿಸಿದ್ದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಓ.ಎಂ. ಪಂಕಜಾಕ್ಷನ್, ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಮಾತ್ರವಲ್ಲದೆ ಜೀವನದ ಸಾರವನ್ನು ತಿಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇಲ್ಲಿ ಎಲ್ಲರೂ ಒಂದೇ, ನಾನು ನೀನು ಎನ್ನುವ ಭೇದಭಾವಕ್ಕೆ ಅವಕಾಶವಿಲ್ಲ. ಪರಸ್ಪರ ಸಹಕಾರಿ ಮನೋಭಾವ ರೂಪಿಸಿಕೊಳ್ಳಲು ಬಹಳ ಮುಖ್ಯವಾದ ಶಿಬಿರ ಎಂದರು.
ಗಾಳಿಬೀಡು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಶಿಕಿರಣ್ ಮಾತನಾಡಿ, ನಮ್ಮ ಗ್ರಾಮದಲ್ಲಿ ಹೀಗೊಂದು ಶಿಬಿರ ನಡೆಯುತ್ತಿರುವುದು ನಮಗೆ ಹೆಮ್ಮೆಯ ವಿಚಾರ, ರಾ.ಸೇ.ಯೋಜನೆಯ ವಿಚಾರಧಾರೆಗಳು ಪ್ರತಿಯೊಬ್ಬ ಮನುಷ್ಯನಿಗೂ ಬಹಳ ಅಗತ್ಯ. ವಿದ್ಯಾರ್ಥಿ ದಿಸೆಯಲ್ಲೇ ಎನ್.ಎಸ್.ಎಸ್ ವಿಚಾರಗಳು ಮನದಲ್ಲಿ ಬೇರೂರಿದರೆ, ಆ ಧನಾತ್ಮಕ ಮಾನಸಿಕ ದೃಢತೆಗೆ ಸರಿಸಾಟಿ ಬೇರೆಯಿಲ್ಲ ಎಂದರು.
ಪ್ರೊ.ಮೇ ರಾಘವ, ನಮ್ಮ ಕಾಲೇಜಿನಿಂದ ಪ್ರತಿ ವರ್ಷವೂ ವಿಶೇಷ ವಾರ್ಷಿಕ ಶಿಬಿರ ನಡೆಯುತ್ತದೆ. ಎನ್.ಎಸ್.ಎಸ್ ವಿದ್ಯಾರ್ಥಿಗಳಿಗೆ ಗ್ರಾಮ ಜೀವನ, ಹೊಂದಾಣಿಕೆಯ ಜೀವನ ಹಾಗು ಸರಳ ಜೀವನದ ಮಹತ್ವವನ್ನು ತಿಳಿಸುತ್ತದೆ. ವಿದ್ಯಾರ್ಥಿಗಳು ರಾ.ಸೇ.ಯೋಜನೆಯಲ್ಲಿ ಕಳೆಯುವ ದಿನಗಳು ಬಹಳ ಪ್ರಮುಖವಾದುದು. ನನಗಲ್ಲ ನಿನಗೆ ಎನ್ನುವ ಧ್ಯೇಯದೊಡನೆ ಸರ್ವರನ್ನೂ ಸಮಾನವಾಗಿ ಕಾಣುವ ಮನೋಭಾವವನ್ನು ಹುಟ್ಟು ಹಾಕುವ ಇಂತಹ ಶಿಬಿರಗಳು ನಡೆಯುತ್ತಲೇ ಇರಬೇಕು ಎಂದರಲ್ಲದೆ, ವಿದ್ಯಾರ್ಥಿಗಳು ಶೈಕ್ಷಣಿಕ ವಿಚಾರಗಳ ಜೊತೆಗೆ ಇಂತಹ ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸಲು ಮನಸ್ಸು ಮಾಡಬೇಕು ಎಂದರು..
ಏಳು ದಿನಗಳ ಶಿಬಿರದಲ್ಲಿ ಭಾಗವಹಿಸಿದ ಸ್ವಯಂಸೇವಕರಲ್ಲಿ ಅತ್ಯುತ್ತಮ ಎನ್.ಎಸ್.ಎಸ್ ಶಿಬಿರಾರ್ಥಿಯಾಗಿ ಆಯ್ಕೆಯಾದ ದ್ವಿತೀಯ ವರ್ಷದ ದೀಕ್ಷಿತ್ ಹಾಗು ಲಕ್ಷ್ಮಿ, ಪ್ರಥಮ ವರ್ಷದ ಮಧುಸೂಧನ್ ಹಾಗು ಲಿಖಿತಾ ಅವರಿಗೆ ಅತ್ಯುತ್ತಮ ಶಿಬಿರಾರ್ಥಿ, ಶಿಬಿರಾರ್ಥಿನಿ ಫಲಕವನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜಿನ ಹಿಂದಿ ಉಪನ್ಯಾಸಕ ತಳವಾರ್, ಎನ್.ಎಸ್.ಎಸ್. ಯೋಜನಾಧಿಕಾರಿಗಳಾದ ಡಾ. ಗಾಯತ್ರಿ, ಡಾ. ಮಹದೇವಯ್ಯ, ಶಿಬಿರಾಧಿಕಾರಿಗಳಾದ ಅಲೋಕ್ ಬಿಜೈ, ಖುರ್ಷಿದಾ ಭಾನು, ಸ್ಥಳೀಯರಾದ ಕೋಚನ ಡಿಶಾಂತ್ ಉಪಸ್ಥಿತರಿದ್ದರು