

ಪುತ್ತೂರು ಗ್ರಾಮಾಂತರ: ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಕಲಿಕೆಯ ಇಚ್ಛಾಶಕ್ತಿ ಇರಬೇಕು. ಕೇವಲ ಕಲಿಕೆಯಿಂದ ಏನೂ ಮಾಡಲು ಸಾಧ್ಯವಿಲ್ಲ. ಕಲಿತು ಉದ್ಯೋಗ ಪಡೆಯಬೇಕು ಎಂಬ ಆಸಕ್ತಿ ಇರಬೇಕು. ಸಮಾಜದಲ್ಲಿ ಸ್ವಂತ ಶಕ್ತಿಯಿಂದ ನಿಲ್ಲಬಲ್ಲೆ ಎಂಬ ಮನೋಭಾವ ಮತ್ತು ಸಮಾಜಸೇವೆ ಮಾಡುವ ಚಿಂತನೆ ಇದ್ದರೆ ಮಾತ್ರ ಜೀವನದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ. ಈ ನಿಟ್ಟಿನಲ್ಲಿ ಸಿಕ್ಕ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಸಾಧನೆಯಲ್ಲಿ ನಿರತರಾಗುವುದು ಬಹಳ ಅಗತ್ಯ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಒಳಮೊಗ್ರು ಗ್ರಾಮದ ಅಜ್ಜಿಕಲ್ಲು ಏಕತ್ತಡ್ಕ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪುತ್ತೂರಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಎನ್ನೆಸ್ಸೆಸ್ ಘಟಕದ ವತಿಯಿಂದ ಇತ್ತೀಚೆಗೆ ನಡೆದ ಎನ್ನೆಸ್ಸೆಸ್ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಪುತ್ತೂರು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ.ಗೋಪಾಲಕೃಷ್ಣ ಕೆ. ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಝೇವಿಯರ್ ಡಿಸೋಜ, ಪ್ರಗತಿಪರ ಕೃಷಿಕರಾದ ಸುಜಾತಾ ಪುಷ್ಪರಾಜ ಶೆಟ್ಟಿ ಯಡ್ಕತ್ತೋಡಿ, ಒಳಮೊಗ್ರು ಗ್ರಾ.ಪಂ. ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಸದಸ್ಯೆ ವನಿತಾ ಯಡ್ಕತ್ತೋಡಿ, ಕಾಲೇಜಿನ ರಕ್ಷಕ ಶಿಕ್ಷಕ ಸಂಘ ಅಧ್ಯಕ್ಷ ಚನಿಯಪ್ಪ ನಾಯ್ಕ ಅತಿಥಿಗಳಾಗಿದ್ದರು.
ಏಕತ್ತಡ್ಕ ಶಾಲೆಯ ಪ್ರಭಾರ ಮುಖ್ಯಶಿಕ್ಷಕಿ ಚಿತ್ರಾ ರೈ ಎಚ್., ಎಸ್‌ಡಿಎಂಸಿ ಅಧ್ಯಕ್ಷ ಮೋಹನ ನಾಯ್ಕ ಮುಂಡೋವುಮೂಲೆ, ನಿಕಟಪೂರ್ವ ಅಧ್ಯಕ್ಷ ತಿಮ್ಮಪ್ಪ ನಾಯ್ಕ, ಎನ್ನೆಸ್ಸೆಸ್ ಶಿಬಿರಾಧಿಕಾರಿಗಳಾದ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಡಾ.ಸುಖೇಶ್ ಪಿ. ಹಾಗೂ ಸವಾಜಶಾಸ್ತ್ರ ವಿಭಾಗದ ಉಪನ್ಯಾಸಕಿ ಡಾ.ಸುಚಿತ್ರಾ ಎಸ್.ಆರ್., ಸಹ ಶಿಬಿರಾಧಿಕಾರಿ ಶೀನ ಜಿ. ಮತ್ತಿತರರಿದ್ದರು.
ಎನ್ನೆಸ್ಸೆಸ್ ಘಟಕ ನಾಯಕಿಯರು ಹಾಗೂ ಅಂತಿಮ ವರ್ಷದ ಬಿ.ಕಾಂ. ವಿದ್ಯಾರ್ಥಿನಿಯರಾದ ನಿಶ್ಮಾ ಬಿ. ಸ್ವಾಗತಿಸಿದರು. ಭಾನುಶ್ರೀ ವಂದಿಸಿದರು. ಅನುಷಾ ಕೆ. ನಿರೂಪಿಸಿದರು.