

ಸೋಮವಾರಪೇಟೆ: ಮಾದಾಪುರ ಡಿ. ಚೆನ್ನಮ್ಮ ಪದವಿಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರವನ್ನು ಹರದೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬೋಜಮ್ಮ ಉದ್ಘಾಟಿಸಿದರು.
ಬಳಿಕ ಮಾತನಾಡಿ, ವಿದ್ಯಾರ್ಥಿ ದೆಸೆಯಿಂದಲೇ ಸೇವಾ ಮನೋಭಾವ ಬೆಳೆಸಿಕೊಳ್ಳುವಂತೆ ಕಿವಿಮಾತು ಹೇಳಿದರು.
ಇಂತಹ ಶಿಬಿರಗಳು ಶಿಸ್ತಿನ ಜೀವನ, ಶ್ರಮದ ಮೌಲ್ಯ ಹಾಗೂ ಸಮಾಜಸೇವೆ ಬಗ್ಗೆ ಕಲಿಸಿಕೊಡುತ್ತದೆ. ಯುವ ಸಮುದಾಯ ಸಮಾಜಸೇವೆಯಲ್ಲಿ ತೊಡಗಿಕೊಂಡಾಗ ಗ್ರಾಮೀಣ ಜನರ ಸಮಸ್ಯೆಗಳು ಅರಿತು ಅದಕ್ಕೆ ಪರಿಹಾರ ಕಂಡುಕೊಳ್ಳುವ ಶಕ್ತಿ ಬರುತ್ತದೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಸಿ.ಜಿ.ಮಂದಪ್ಪ ಮಾತನಾಡಿ, ವಿದ್ಯಾರ್ಥಿಗಳು ಸೇವಾ ಮನೋಭಾವ, ಶಿಸ್ತನ್ನು ಕಲಿಯಬೇಕು. ಸೂಕ್ತ ಮಾರ್ಗದರ್ಶನ ಪಡೆದು ಉತ್ತಮ ಪ್ರಜೆಯಾಗಿ ರೂಪುಗೊಳ್ಳಬೇಕು ಎಂದು ಹೇಳಿದರು.
ಯುವಕರ ದೇಶದ ಸಂಪತ್ತು. ದೇಶಕ್ಕೆ ಯುವಕರ ಕೊಡುಗೆ ಅವಶ್ಯಕವಿದೆ. ಇಂದಿನಿಂದಲೇ ಸಾಧನೆಯ ಮೆಟ್ಟಿಲೇರುವುದಕ್ಕೆ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಹಳೇ ವಿದ್ಯಾರ್ಥಿಗಳಾಸ ಎಂ.ಎ.ಮುಸ್ತಫಾ, ಪಾರ್ವತಿ, ಎಂ.ಪಿ.ದೇವಪ್ಪ ವಿದ್ಯಾರ್ಥಿಗಳಿಗೆ ಶಿಸ್ತು, ಸಂಯಮ, ಸಮಯಪಾಲನೆ, ಕಲಿಕೆ, ಹಿರಿಯರು ಮತ್ತು ಶಿಕ್ಷಕರ ಮಾರ್ಗದರ್ಶನ ಪಡೆಯುವ ಬಗ್ಗೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಉಪನ್ಯಾಸಕ ರಾಜಸುಂದರಂ ಹರದೂರು ಗ್ರಾಮ ಪಂಚಾಯಿತಿ ಪಿಡಿಒ ಪೂರ್ಣಿಮಾ, ಪ್ರಮುಖರಾದ ದೇವಯ್ಯ, ಎಚ್.ಎಸ್.ಗಣೇಶ್ ಇದ್ದರು. ಶಿಬಿರದಲ್ಲಿ ಸಂಸ್ಥೆಯ 50 ವಿದ್ಯಾರ್ಥಿಗಳು ಭಾಗವಹಿಸಿದ್ದರು.