

ಗಂಡಸಿ: ಪ್ರೌಢಶಾಲಾ ಮಟ್ಟದಲ್ಲಿ ಎನ್‌ಎಸ್‌ಎಸ್ ಘಟಕ ಪ್ರಾರಂಭಿಸಿದ ಮೊದಲ ಶಾಲೆ ಗಂಡಸಿ ಸೇಂಟ್ ಜಾನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಎಂದು ಹೆಮ್ಮೆಯಿಂದ ಹೇಳಲು ನನಗೆ ಸಂತೋಷವಾಗುತ್ತದೆ ಎಂದು ಸೇಂಟ್ ಜಾನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಮುಕೇಶ್ ತಿಳಿಸಿದರು.
ಹೋಬಳಿಯ ಬಾಗಿವಾಳು ಗ್ರಾಮದಲ್ಲಿ ಸೇಂಟ್ ಜಾನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ವತಿಯಿಂದ ಹಮ್ಮಿಕೊಂಡಿರುವ ಎನ್‌ಎಸ್‌ಎಸ್ ಶಿಬಿರವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿ, ನಮ್ಮ ಶಾಲೆಯ ಶಿಬಿರಾರ್ಥಿಗಳಿಂದ ಪ್ರತಿದಿನ ಗ್ರಾಮದ ದೇವಾಲಯ, ಕಲ್ಯಾಣಿ, ಸರ್ಕಾರಿ ಕಟ್ಟಡಗಳ ಸ್ವಚ್ಛತಾ ಕಾರ್ಯಗಳು ನಡೆಯಲಿದೆ. ನಂತರ ಪ್ರತಿದಿನ ಸಂಜೆ ಶಿಬಿರಾರ್ಥಿಗಳು, ಸ್ಥಳೀಯ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಖ್ಯಾತ ನ್ಯಾಯವಾದಿಗಳು, ಚಿಂತಕರು, ಪ್ರಗತಿಪರ ರೈತರು, ಪರಿಸರ ಲೇಖಕರು, ಪ್ರೇಮಿಗಳು, ಕವಿಗಳಿಂದ ವಿಷಯಗಳಿಗೆ ಸಂಬಂಧಿಸಿದ ವಿಚಾರ ಸಂಕೀರ್ಣ ಕಾರ್ಯಕ್ರಮ ಏರ್ಪಡಿಸಲಾಗುವುದು. ಗ್ರಾಮದ ಮಹಿಳೆಯರು ಒಂದು ವಾರಗಳ ಕಾಲ ಧಾರಾವಾಹಿಗಳಿಗೆ ಗಮನಹರಿಸದೆ ಮಕ್ಕಳ ಕಾರ್ಯಕ್ರಮವನ್ನು ವೀಕ್ಷಿಸುವ ಮೂಲಕ ಪ್ರೋತ್ಸಾಹ ನೀಡಿ ಎಂದರು.
ಬಾಗಿವಾಳು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪವಿತ್ರಾ, ಸಮಾಜ ಸೇವಕ ಡೇರಿ ರಾಜಣ್ಣ, ಪರಿಸರ ಪ್ರೇಮಿ ಶಂಕರೇಗೌಡ, ಗ್ರಾಪಂ ಸದಸ್ಯೆ ನಳಿನಿ, ಶಿಕ್ಷಕರಾದ ದುರ್ಗಪ್ಪ, ಚಂದ್ರಶೇಖರ್, ಶ್ರುತಿ, ಹೇಮಲತಾ, ಭಾರತಿ, ಸಹನಾ ಇತರರು ಇದ್ದರು.