ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ಶ್ರಮದಾನ

12mdk05
Published on

ಮಡಿಕೇರಿ:

ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಹಮ್ಮಿಕೊಂಡಿರುವ ವಾರ್ಷಿಕ ವಿಶೇಷ ಶಿಬಿರದಲ್ಲಿ ಸೋಮವಾರ ಎನ್ನೆಸ್ಸೆಸ್ ವಿದ್ಯಾರ್ಥಿಗಳು ಕಾಲೇಜು ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿ ಜನರಲ್ಲಿ ಪರಿಸರ ಜಾಗೃತಿ ಮೂಡಿಸಿದರು.

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳೆದಿದ್ದ ಗಿಡ-ಗಂಟಿಗಳನ್ನು ತೆರವುಗೊಳಿಸಿ ಪರಿಸರವನ್ನು ಸ್ವಚ್ಛಗೊಳಿಸಲಾಯಿತು. ಕಾಲೇಜು ಆವರಣದಂಚಿನಲ್ಲಿರುವ ಚರಂಡಿಯನ್ನು ಸ್ವಚ್ಚಗೊಳಿಸುವ ಮೂಲಕ ಅಲ್ಲಲ್ಲಿ ಬಿಸಾಕಿದ್ದ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯವನ್ನು ಆಯ್ದು ಆವರಣ ಸ್ವಚ್ಛಗೊಳಿಸಲಾಯಿತು.

ಕಾಲೇಜು ಆವರಣದಲ್ಲಿರುವ ಶೌಚಾಲಯ ಸ್ವಚ್ಛಗೊಳಿಸಿದ ಎನ್.ಎಸ್.ಎಸ್. ಸ್ವಯಂ ಸೇವಕ ವಿದ್ಯಾರ್ಥಿಗಳು ಮಹಾತ್ಮಗಾಂಧೀಜಿಯವರು ಸ್ವಚ್ಛತೆಗೆ ನೀಡುತ್ತಿದ್ದ ಆದ್ಯತೆ ಕುರಿತು ವಿದ್ಯಾರ್ಥಿ ಸಮುದಾಯದಲ್ಲಿ ಅರಿವು ಮೂಡಿಸಿದರು.
ಈ ವೇಳೆ ಮಾತನಾಡಿದ ಕಾಲೇಜು ಪ್ರಾಂಶುಪಾಲ ಪ್ರೊ. ವೆಂಕಟೇಶ್ ಪ್ರಸನ್ನ ರಾಷ್ಟ್ರೀಯ ಸೇವಾ ಯೋಜನಾ ಶಿಬಿರಗಳು ಯುವ ಜನಾಂಗದಲ್ಲಿ ವ್ಯಕ್ತಿತ್ವ ವಿಕಸನಗೊಳಿಸುವುದರ ಜತೆಗೆ ಸಹ ಬಾಳ್ವೆ, ಸಂಘಟನೆ, ಶ್ರಮದಾನ ಸೇರಿದಂತೆ ಮಾನವೀಯ ಮೌಲ್ಯಗಳನ್ನು ಹೆಚ್ಚಿಸುವುದಲ್ಲದೆ ರಾಷ್ಟ್ರೀಯ ಭಾವೈಕ್ಯತೆ ಹಾಗೂ ಸಾಮಾಜಿಕ ಕಳಕಳಿಯನ್ನು ಕಲಿಸುತ್ತವೆ ಎಂದರು.

ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ ಡಾ. ಎಂ.ಎ. ಪ್ರಕಾಶ್ ಮಾತನಾಡಿ ವಿದ್ಯಾರ್ಥಿಗಳಿಗೆ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಎನ್‌ಎಸ್‌ಎಸ್ ಸಹಕಾರಿಯಾಗಿದೆ. ವಿದ್ಯಾರ್ಥಿಗಳಲ್ಲಿ ಪ್ರಾಮಾಣಿಕತೆ ಮತ್ತು ಸಮಾಜ ಸೇವಾ ಮನೋಭಾವ ಅತ್ಯಗತ್ಯವಿದ್ದು, ಪ್ರತಿಯೊಬ್ಬರೂ ಶಿಕ್ಷಣದ ಜೊತೆಗೆ ಸಾಮಾಜಿಕ ಮೌಲ್ಯಗಳನ್ನು ಬೆಳೆಸಿಕೊಂಡು ಆದರ್ಶ ವಿದ್ಯಾರ್ಥಿಗಳಾಗಿ ರೂಪುಗೊಳ್ಳಲು ಈ ರೀತಿಯ ಶಿಬಿರಗಳು ಪೂರಕವಾಗಿದೆ ಎಂದರು.

ಶ್ರಮದಾನ ಕಾರ್ಯದಲ್ಲಿ ಶಿಬಿರದ ಸಹ ಶಿಬಿರಾಧಿಕಾರಿಗಳಾದ ಸಹಾಯಕ ಪ್ರಾಧ್ಯಾಪಕಿ ವಸಂತಕುಮಾರಿ, ಎವೆರೆಸ್ಟ್ ರೊಡ್ರಿಗಾಸ್, ಡಾ. ಕೆ.ಡಿ.ನಿರ್ಮಲಾ, ಡಾ ಚೈತ್ರ‍್ರಾ ಹಾಗೂ ಶಿಬಿರಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net