

ವಿಜಯವಾಣಿ ಸುದ್ದಿಜಾಲ ಉಡುಪಿ
ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿಗೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಎನ್ಎಸ್ಎಸ್ನ ಚಟುವಟಿಕೆಗಳು ಸಹಕಾರಿಯಾಗಿದೆ. ಅಲ್ಲದೆ, ಜನಸಾಮಾನ್ಯರೊಂದಿಗೆ ನಿಕಟ ಸಂಪರ್ಕ ಸಾಧಿಸಿ ಅವರ ಶ್ರಮದಾಯಕ ಜೀವನದ ಕುರಿತು ಅರಿವು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಅದರಿಂದ ವಿದ್ಯಾರ್ಥಿಗಳ ಮುಂದಿನ ಬದುಕಿಗೆ ದಾರಿದೀಪವಾಗುತ್ತದೆ ಎಂದು ಸ್ಕೂಲ್ ಆಫ್ ಕಾಮರ್ಸ್ ಆ್ಯಂಡ್ ಎಕನಾಮಿಕ್ಸ್ನ ಸಹಪ್ರಾಧ್ಯಾಪಕ ಡಾ. ಸತೀಶಕುಮಾರ್ ಅಭಿಪ್ರಾಯಪಟ್ಟರು.
ಉಡುಪಿಯ ಸರ್ಕಾರಿ ಪದವಿ ಪೂರ್ವ ಕಾಲೇಜ್ (ಬೋರ್ಡ್ ಹೈಸ್ಕೂಲ್)ನ ಸಭಾಭವನದಲ್ಲಿ ಜುಲೈ 21ರಂದು ಆಯೋಜಿಸಿದ್ದ 2025-26ನೇ ಸಾಲಿನ ಎನ್ಎಸ್ಎಸ್ ಕಾರ್ಯಚಟುವಟಿಕೆ ಉದ್ಘಾಟಿಸಿ ಮಾತನಾಡಿದರು.
ಕಾಲೇಜಿನ ಎನ್ಎಸ್ಎಸ್ ಘಟಕದ ಕಾರ್ಯಕ್ರಮಾಧಿಕಾರಿ ಉಪನ್ಯಾಸಕ ಪರಮೇಶ್ವರ ಎಂ. ಮೊಗವೀರ ಮಾತನಾಡಿ, ವಿದ್ಯಾರ್ಥಿಗಳಿಗೆ ಶ್ರಮದಾನ ಹಾಗೂ ಬೌದ್ಧಿಕ ಚಟುವಟಿಕೆಗಳ ಮೂಲಕ ವ್ಯಕ್ತಿತ್ವ ನಿರ್ಮಿಸಲು ಶ್ರಮಿಸಲಾಗುತ್ತಿದೆ. ಮೂರ್ನಾಲ್ಕು ವರ್ಷದಿಂದ ಉಡುಪಿ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ವಿಶೇಷ ಶಿಬಿರ ಆಯೋಜಿಸಿ, ಪರಿಸರಕ್ಕೆ ಮಾರಕವಾಗಿರುವ ಸುಮಾರು 15-20 ಕ್ವಿಂಟಲ್ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿ, ವಿಲೇವಾರಿ ಮಾಡಿದ್ದು, ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಲಾಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲೆ ಲೀಲಾಬಾಯಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಅನಂತರಾಮ ಬಲ್ಲಾಳ, ನಿವೃತ್ತ ಪ್ರಾಂಶುಪಾಲ ವಿಲಾಸಕುಮಾರ್, ಪಾಲಕರ ಸಮಿತಿಯ ಅಧ್ಯಕ್ಷ ಸ್ಟೀಫನ್ ಮಸ್ಕರೇನ್ಹಸ್, ವಿದ್ಯಾರ್ಥಿ ಸಂಘದ ಸಂಚಾಲಕಿ ಗ್ರೇಸಿ ಕೆ.ಜೆ., ಹಿರಿಯ ಉಪನ್ಯಾಸಕ ಕೃಷ್ಣಾನಂದ ಉಪಸ್ಥಿತರಿದ್ದರು.
ಎನ್ಎಸ್ಎಸ್ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಉಪನ್ಯಾಸಕ ನಾಗರಾಜ ಸ್ವಾಗತಿಸಿದರು. ಸುಮನಾ ವಂದಿಸಿದರು. ಪ್ರಿಯಾ ಕಾರಿಣಿ ಕಾರ್ಯಕ್ರಮ ನಿರೂಪಿಸಿದರು.