

ಬೆಂಗಳೂರು: ಸ್ವಾಮಿ ವಿವೇಕಾನಂದ ಜಯಂತಿ ದಿನವಾದ ಭಾನುವಾರ ರಾಷ್ಟ್ರೀಯ ಯುವ ದಿನಾಚರಣೆಯಂದೇ ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಹಾಗೂ ಅವರ ಬೆಂಬಲಿಗರಿಂದ ‘ಎನ್‌ಆರ್‌ಆರ್ ಯುವ ಬ್ರಿಗೇಡ್’ಗೆ ವಿಧ್ಯುಕ್ತ ಚಾಲನೆ ದೊರೆತಿದೆ.
ಸಾಮಾಜಿಕ ಸೇವಾ ಚಟುವಟಿಕೆಗಳ ಜತೆಗೆ ದೀನ ದಲಿತರು, ಅಂಗವಿಕಲರಿಗೆ ನೆರವು ಹಾಗೂ ಯುವಜನತೆಗೆ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶದಿಂದ ಈ ಯುವ ಬ್ರಿಗೇಡ್ ಅನ್ನು ಆರಂಭಿಸಲಾಗಿದೆ. ಬ್ರಿಗೇಡ್ ಉದ್ಘಾಟನೆ ನಿಮಿತ್ತ ವಾಕಥಾನ್ ಹಮ್ಮಿಕೊಳ್ಳಲಾಗಿತ್ತು. ಯಡಿಯೂರು ಕೆರೆ ಆವರಣದಲ್ಲಿರುವ ಸ್ವಾಮಿ ವಿವೇಕಾನಂದ ಪ್ರತಿಮೆಗೆ ಪುಷ್ಟಾರ್ಚನೆ ಮಾಡುವ ಮೂಲಕ ಎಪಿಎಸ್ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ವಿಷ್ಣು ಭರತ್ ಚಾಲನೆ ನೀಡಿದರು. ಈ ವೇಳೆ ಅವರು ಬ್ರಿಗೇಡ್ನ ಕಾರ್ಯ ಚಟುವಟಿಕೆಗಳ ಬಗ್ಗೆ ಶ್ಲಾಘಿಸಿದರು.
ಯಡಿಯೂರು ಕೆರೆಯಿಂದ ಸೌತ್ ಎಂಡ್ ವೃತ್ತದಲ್ಲಿರುವ ಡಾ.ರಾಜ್‌ಕುಮಾರ್ ಕಂಚಿನ ಪ್ರತಿಮೆವರೆಗಿನ 1.5 ಕಿ.ಮೀ. ಉದ್ದಕ್ಕೂ ನಡೆದ ವಾಕಥಾನ್‌ನಲ್ಲಿ ಅಂದಾಜು 1,000ಕ್ಕೂ ಅಧಿಕ ಯುವಕ- ಯುವತಿಯರು, ಕಾಲೇಜು ವಿದ್ಯಾರ್ಥಿಗಳು, ಅಂಗವಿಕಲರು ಪಾಲ್ಗೊಂಡಿದ್ದರು. ಬೆಂಗಳೂರಿನ ಸುತ್ತಮುತ್ತಲಿನ ಜಿಲ್ಲೆಗಳಿಂದಲೂ ಯುವಜನರು ಭಾಗಿಯಾಗಿದ್ದರು.