

ಎನ್.ಆರ್.ಪುರ: ತಾಲೂಕಿನಲ್ಲಿ ಮಳೆ ಇಲ್ಲದೆ ಬೆಳೆ ಹಾನಿಯಾಗಿ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ತಾಲೂಕನ್ನು ಬರ ಪೀಡಿತ ಎಂದು ಘೋಷಿಸಲು ಗ್ರಾಮಸಭೆಯಲ್ಲಿ ಗ್ರಾಪಂ ಮಾಜಿ ಉಪಾಧ್ಯಕ್ಷ ಡಿ.ಜಿ.ಸತೀಶ್ ಆಗ್ರಹಿಸಿದರು.
ಕಡಹಿನಬೈಲು ಗ್ರಾಪಂನಲ್ಲಿ ಬುಧವಾರ ನಡೆದ ಗ್ರಾಮಸಭೆಯಲ್ಲಿ ಮಾತನಾಡಿ, ನೀರಿನ ಸಮಸ್ಯೆ ಎದುರಾಗಬಹುದಾದ ಮುನ್ಸೂಚನೆ ಇದೆ. ಆದ್ದರಿಂದ ಸರ್ಕಾರ ಬರ ಪೀಡಿತ ತಾಲೂಕೆಂದು ಘೋಷಿಸಲು ಒತ್ತಾಯಿಸಿದರು.
ಹಿರಿಯ ರೈತ ಹಿರೇಬೀಸ್ ಜೆ.ಟಿ.ಸುರೇಂದ್ರ ಮಾತನಾಡಿ, ಪ್ರತಿ ವರ್ಷ ರೈತರ ಬೆಳೆ ಕಾಲಂನಲ್ಲಿ ನೋ ಕ್ರಾಪ್ ಎಂದು ನೋಂದಣಿಯಾಗುತ್ತಿದೆ. ಅಂದರೆ ಅಧಿಕಾರಿಗಳು ಮಾಡುವ ಬೆಳೆ ಸಮೀಕ್ಷೆ ಸುಳ್ಳು ಎಂದು ತಿಳಿಯುತ್ತದೆ. ತಾಲೂಕು ಕಚೇರಿಯಲ್ಲಿ ಹಲವಾರು ಕಡತಗಳು ನಾಪತ್ತೆಯಾಗಿವೆ. ಅರ್ಜಿ ನೀಡಿದರೆ ಕಡತ ಇಲ್ಲ ಎಂದು ಹಿಂಬರಹ ನೀಡುತ್ತಿದ್ದಾರೆ. ಇದಕ್ಕೆ ಯಾರು ಜವಾಬ್ದಾರರು ಎಂದು ಪ್ರಶ್ನಿಸಿದರು.
ಗ್ರಾಪಂ ಮಾಜಿ ಸದಸ್ಯ ಎಂ.ಮಹೇಶ್ ಮಾತನಾಡಿ, ಕಂದಾಯ ಇಲಾಖೆಯಲ್ಲಿ ಅನೇಕ ಸಮಸ್ಯೆಗಳಿವೆ. ಅದರ ಪರಿಹಾರಕ್ಕೆ ಉಪ ವಿಭಾಗಾಧಿಕಾರಿ ಗ್ರಾಪಂ ಮಟ್ಟದಲ್ಲಿ ಜನಸಂಪರ್ಕ ಸಭೆ ನಡೆಸಬೇಕೆಂದು ಒತ್ತಾಯಿಸಿದರು.
ಅಬಕಾರಿ ಎಸ್‌ಐ ಶೇಖರ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಮದ್ಯಅಕ್ರಮ ಮಾರಾಟ ಕಡಿಮೆಯಾಗುತ್ತಿದೆ. ಕಾನೂನಿನ ಪ್ರಕಾರ ಒಬ್ಬ 1 ಲೀ. ಮದ್ಯ ಮನೆಯಲ್ಲಿ ಇಟ್ಟುಕೊಂಡು ಉಪಯೋಗಿಸಬಹುದು. ಆದರೆ ಮಾರಾಟ ಮಾಡುವಂತಿಲ್ಲ. ಗಾಂಜಾ ಮಾರಾಟ ಅಧಿಕವಾಗುತ್ತಿದೆ. ಇದರ ನಿಗ್ರಹಕ್ಕೆ ಗ್ರಾಮಸ್ಥರು ಇಲಾಖೆಯೊಂದಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಆಹಾರ ನಿರೀಕ್ಷಕ ಗಣಪತಿ ಮಾತನಾಡಿ, ಕೆಲ ಬಿಪಿಎಲ್ ಕಾರ್ಡ್‌ದಾರರು ಪಡಿತರ ಅಕ್ಕಿಯನ್ನು ಅಂಗಡಿಗೆ ಮಾರಾಟ ಮಾಡುತ್ತಿದ್ದಾರೆ. ಅಂಥವರ ಮಾಹಿತಿ ನೀಡಿದರೆ ಕಾರ್ಡ್ ರದ್ದುಪಡಿಸಲಾಗುವುದು ಎಂದರು.
ನೋಡೆಲ್ ಅಧಿಕಾರಿ ಪುನಿತ್, ಗ್ರಾಪಂ ಅಧ್ಯಕ್ಷೆ ಶೈಲಾ ಮಹೇಶ್, ಉಪಾಧ್ಯಕ್ಷ ಸುನಿಲ್‌ಕುಮಾರ್, ಸದಸ್ಯರಾದ ರವೀಂದ್ರ, ಚಂದ್ರಶೇಖರ್, ಎ.ಬಿ.ಮಂಜುನಾಥ್, ವಾಣಿ ನರೇಂದ್ರ, ಅಶ್ವಿನಿ, ಲಿಲ್ಲಿಮಾತು ಕುಟ್ಟಿ, ಪೂರ್ಣಿಮಾ, ಗ್ರಾಮದ ಎಲ್ದೋ, ಜೇಮ್ಸ್, ವಿಜಯನ್, ಚಂದ್ರೇಗೌಡ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಧನಂಜಯ ಮೇದೂರ, ಕಂದಾಯ ನಿರೀಕ್ಷಕ ಮಂಜುನಾಥ್, ಸಿಡಿಪಿಒ ಇಲಾಖೆ ಕಾವ್ಯಶ್ರೀ, ಇಂಜಿನಿಯರ್ ಶ್ರೀಧರ್, ಮಮತಾ, ಮೆಸ್ಕಾಂ ಜೆಇ ಶಶಿಕುಮಾರ್, ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಮಸ್ಥರು ಭಾಗವಹಿಸಿದ್ದರು.