ಎನ್‌ಆರ್‌ಐ ಫೋರಂ ಡಾ. ಆರತಿ ಕೃಷ್ಣ ಉಪಾಧ್ಯಕ್ಷೆ, ವಿಜಯವಾಣಿ ವರದಿಗೆ ಎಚ್ಚೆತ್ತ ಸರ್ಕಾರ- 5 ವರ್ಷದ ಬಳಿಕ ಮರುಜೀವ ಪಡೆದ ಫೋರಂ

NRI
Published on

ಮಂಗಳೂರು: ಕಳೆದ 4-5 ವರ್ಷಗಳಿಂದ ಎನ್‌ಆರ್‌ಐ ೆರಂ ರಾಜ್ಯದಲ್ಲಿ ಪೂರ್ಣ ನಿಷ್ಕ್ರಿಯವಾಗಿದ್ದು, ಪ್ರಸ್ತುತ ಉಪಾಧ್ಯಕ್ಷರ ನೇಮಕಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಎನ್‌ಆರ್‌ಐ ವಿಭಾಗ ಕಾರ್ಯದರ್ಶಿ ಡಾ.ಆರತಿ ಕೃಷ್ಣ ಅವರನ್ನು ಅನಿವಾಸಿ ಭಾರತೀಯ ಕೋಶ ಕರ್ನಾಟಕ ಇದರ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಸಂಪುಟ ದರ್ಜೆ ಸ್ಥಾನಮಾನ ನೀಡಿ ಕರ್ನಾಟಕ ಸರ್ಕಾರ ಆದೇಶ ನೀಡಿದೆ.

ಇತ್ತೀಚೆಗೆ ‘ಇಸ್ರೇಲ್ ಬಿಕ್ಕಟ್ಟಿನಲ್ಲೂ ಎನ್‌ಆರ್‌ಐ ೆರಂ ನಿಷ್ಕ್ರಿಯ’ ಎಂಬ ವಿಶೇಷ ವರದಿ ವಿಜಯವಾಣಿ ಪ್ರಕಟಿಸಿದ ಬೆನ್ನಲ್ಲೇ ಎಚ್ಚೆತ್ತ ರಾಜ್ಯ ಸರ್ಕಾರ ಎನ್‌ಆರ್‌ಐ ಫೋರಂ ಉಪಾಧ್ಯಕ್ಷರ ನೇಮಕಕ್ಕೆ ಕ್ರಮ ಕೈಗೊಂಡಿದೆ. ರಾಜ್ಯದಲ್ಲಿ ಎನ್‌ಆರ್‌ಐ ಫೋರಂ ಆರಂಭವಾದ 2ನೇ ಅವಧಿಯಲ್ಲಿ ಉಪಾಧ್ಯಕ್ಷರಾಗಿ ಡಾ.ಆರತಿ ಕೃಷ್ಣ ಈ ಹಿಂದೆ ಕಾರ್ಯನಿರ್ವಹಿಸಿದ್ದರು.

2.84 ಕೋಟಿ ಎನ್‌ಆರ್‌ಐಗಳು

ಉದ್ಯೋಗ ಹಾಗೂ ಶಿಕ್ಷಣದ ಸಲುವಾಗಿ ಪ್ರಪಂಚದ ಸುಮಾರು 185 ದೇಶಗಳಲ್ಲಿ 2.84 ಕೋಟಿ ಅನಿವಾಸಿ ಭಾರತೀಯರು ನೆಲೆಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಅಂದಾಜಿಸಿದೆ. ಗಲ್ಫ್ ರಾಷ್ಟ್ರಗಳಲ್ಲೇ ಕರಾವಳಿಯ ಸುಮಾರು 5 ಲಕ್ಷ ಮಂದಿ ಇದ್ದಾರೆ. ಒಟ್ಟಾರೆ 10 ಲಕ್ಷಕ್ಕೂ ಅಧಿಕ ಮಂದಿ ಬೇರೆ ಬೇರೆ ದೇಶಗಳಲ್ಲಿದ್ದಾರೆ. 2008- 09 ನೇ ಸಾಲಿನ ಬಜೆಟ್‌ನಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಯಸ್.ಯಡಿಯೂರಪ್ಪ ಎನ್‌ಆರ್‌ಐ ಸಮಿತಿ ಯೋಜನೆ ಪ್ರಕಟಿಸಿದ್ದರು. ಬಿಜೆಪಿ ಸರ್ಕಾರ ಆರಂಭಿಸಿದ ಒಂದು ವೇದಿಕೆ ಅದೇ ಪಕ್ಷದ ಸರ್ಕಾರದ ಅವಧಿಯಲ್ಲಿ ಉಪಾಧ್ಯಕ್ಷರ ನೇಮಕವಾಗದೆ ನಿಷ್ಕ್ರಿಯವಾಗಿತ್ತು. ಕಳೆದ ವರ್ಷ ದುಬೈ ಎನ್‌ಆರ್‌ಐ ಫೋರಂ ಈ ಬಗ್ಗೆ ಟ್ವಿಟ್ಟರ್ ಅಭಿಯಾನ ನಡೆಸಿತ್ತು. ಸಮಿತಿ ಅಧ್ಯಕ್ಷರು ಮುಖ್ಯಮಂತ್ರಿಯವರೇ ಇರುತ್ತಾರೆ. ಆದ್ದರಿಂದ ಸಮಿತಿಯ ಚಟುವಟಿಕೆಗಳ ಕೇಂದ್ರ ಉಪಾಧ್ಯಕ್ಷರೇ ಆಗಿದ್ದು, ಅವರಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡಲಾಗಿದೆ. ಕರಾವಳಿ ಜಿಲ್ಲೆಯ ಕ್ಯಾ.ಗಣೇಶ್ ಕಾರ್ಣಿಕ್ ವೇದಿಕೆಯ ಪ್ರಥಮ ಉಪಾಧ್ಯಕ್ಷರಾಗಿದ್ದರು. ಬಳಿಕ ಆರತಿ ಕೃಷ್ಣ, ವಿ.ಸಿ. ಪ್ರಕಾಶ್ ಉಪಾಧ್ಯಕ್ಷರಾಗಿದ್ದರು. ಇದಾದ ಬಳಿಕ ಯಾವುದೇ ಚಟುವಟಿಕೆಗಳು ಸಮಿತಿಯಿಂದ ನಡೆದಿಲ್ಲ.

ಪ್ರತ್ಯೇಕ ಸಚಿವಾಲಯ ಕನಸಿಗೆ ಬಲ

ಎನ್‌ಆರ್‌ಐ ೆರಂ ರಾಜ್ಯದಲ್ಲಿ ಪೂರ್ಣ ನಿಷ್ಕ್ರಿಯವಾಗಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರ್ನಾಟಕದಲ್ಲಿ ಕೇರಳ ಮಾದರಿ ಅನಿವಾಸಿ ಭಾರತೀಯರಿಗೆ ಪ್ರತ್ಯೇಕ ಸಚಿವಾಲಯ ಆರಂಭಿಸಲಾಗುವುದು ಎಂದು ಚುನಾವಣೆ ಸಂದರ್ಭ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಎನ್‌ಆರ್‌ಐ ವಿಭಾಗ ಕಾರ್ಯದರ್ಶಿ ಡಾ.ಆರತಿ ಕೃಷ್ಣ ಘೋಷಿಸಿದ್ದರು. ಎನ್‌ಆರ್‌ಐ ವಿಭಾಗ ಬಲಪಡಿಸಲು, ಎನ್‌ಆರ್‌ಐ ಕಾರ್ಡ್ ವಿತರಿಸಲು ಮತ್ತು ಎನ್‌ಆರ್‌ಐ ಕನ್ನಡಿಗರ ಸಂಪೂರ್ಣ ಡೇಟಾ ದಾಖಲಿಸಲು ಪ್ರತ್ಯೇಕ ವ್ಯವಸ್ಥೆ ಈ ಯೋಜನೆಯಲ್ಲಿ ಬರಲಿದ್ದು, ಇದಕ್ಕಾಗಿ 1,000 ಕೋಟಿ ಆವರ್ತ ನಿಧಿ ರಚಿಸುವ ಉದ್ದೇಶ ಹೊಂದಲಾಗಿದೆ. ಕಾಂಗ್ರೆಸ್ ಸರ್ಕಾರದ ಪ್ರಣಾಳಿಕೆಯಲ್ಲಿಯೂ ಇದನ್ನು ದಾಖಲಿಸಲಾಗಿತ್ತು. ಡಾ.ಆರತಿ ಕೃಷ್ಣ ಆಯ್ಕೆಯಿಂದ ಎನ್‌ಆರ್‌ಐ ಪ್ರತ್ಯೇಕ ಸಚಿವಾಲಯ ಕನಸಿಗೆ ಬಲ ಬಂದಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net