

ದೇವದುರ್ಗ: ತಾಲೂಕಿನ ಪಲಕನಮರಡಿ ಗ್ರಾಪಂ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದ ಕೂಲಿಕಾರರಿಗೆ ಕೂಲಿ ನೀಡುವಂತೆ ಒತ್ತಾಯಿಸಿ ಗ್ರಾಪಂ ಕಚೇರಿಯಲ್ಲಿ ಕಾರ್ಯದರ್ಶಿ ಮಹೇಶ ನಾಯಕಗೆ ನಮ್ಮ ಕರ್ನಾಟಕ ಸೇನೆ ಶುಕ್ರವಾರ ಮನವಿ ಸಲ್ಲಿಸಿತು.
ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ನರೇಗಾ ಯೋಜನೆಯಡಿ ಕೆಲಸ ಮಾಡಿದ ನೂರಾರು ಕಾರ್ಮಿಕರಿಗೆ ಕೂಲಿಹಣ ಪಾವತಿ ಮಾಡಿಲ್ಲ. ಇದರಿಂದ ಜನ ಜೀವನ ನಡೆಸುವುದು ಕಷ್ಟವಾಗಿದ್ದು ಗುಳೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ.
2024 ಆ.24ರಂದು ನರೇಗಾ ಯೋಜನೆಯಡಿ ಕೆಲಸ ಮಾಡಿದ 28ಕೂಲಿಕಾರರಿಗೆ 6ತಿಂಗಳು ಕಳೆದರೂ ಹಣ ನೀಡಿಲ್ಲ. ಮಾ.9ರಂದು 15ದಿನ ಕೆಲಸ ಮಾಡಿದ ಕೂಲಿಕಾರ್ಮಿಕರಿಗೆ ವೇತನ ನೀಡಿಲ್ಲ. 2025 ಫೆ.25ರಂದು ಕೆಲಸ ಮಾಡಿದ 60ಜನ ಕಾರ್ಮಿಕರಿಗೆ ಕೂಲಿ ಜಮೆ ಆಗಿಲ್ಲ. ಊಟಿ ಗ್ರಾಮದಲ್ಲಿ 2024 ಆ.8ರಂದು 15ದಿನ ಕೆಲಸ ಮಾಡಿದ 29 ಕೂಲಿಕಾರರಿಗೆ ಕೂಲಿ ನೀಡಿಲ್ಲ ಎಂದು ಆರೋಪಿಸಿದರು.
ಅಲ್ಲದೆ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದವರೆಗೆ ಕೆಲಸ ನೀಡಿಲ್ಲ. ಹಲವರ ಜಾಬ್‌ಕಾರ್ಡ್ ರದ್ದುಮಾಡಿದ್ದು, ಅರ್ಜಿ ಹಾಕಿದರೂ ಕಾರ್ಡ್ ನೀಡಿಲ್ಲ. ತಕ್ಷಣ ಎಲ್ಲ ಕೂಲಿಕಾರರಿಗೆ ಒಂದು ವಾರದೊಳಗೆ ವೇತನ ನೀಡಬೇಕು. ಕೆಲಸ ಹಾಗೂ ಜಾಬ್‌ಕಾರ್ಡ್‌ಗೆ ಅರ್ಜಿ ಹಾಕಿದವರಿಗೆ ತಕ್ಷಣ ಸ್ಪಂದಿಸಬೇಕು. ನಿರ್ಲಕ್ಷ್ಯ ಮಾಡಿದರೆ ಏ.25ರಂದು ಗ್ರಾಪಂ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.