

ಮೈಸೂರು: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ (ಮ-ನರೇಗಾ) ಕೂಲಿ ಹೆಚ್ಚಳದಿಂದ ಜಿಲ್ಲೆಯ ಕೂಲಿ ಕಾರ್ಮಿಕರು ಸಂತಸಗೊಂಡಿದ್ದಾರೆ. ಏಪ್ರಿಲ್ 1 ರಿಂದ ಅನ್ವಯವಾಗುವಂತೆ ಕೂಲಿಯನ್ನು 21 ರೂ. ಏರಿಗೆ ಏರಿಕೆ ಮಾಡಲಾಗಿದೆ.
ಗ್ರಾಮೀಣ ಭಾಗದ ಅಕುಶಲ ಕೂಲಿ ಕೆಲಸ ಮಾಡುವ ಕೂಲಿಕಾರರ ದಿನಗೂಲಿಯನ್ನು 349 ರೂ.ನಿಂದ 370 ರೂ.ಗಳಿಗೆ ಹೆಚ್ಚಳ ಮಾಡಿ ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು ಆದೇಶ ಹೊರಡಿಸಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಯುಕೇಶ್‌ಕುಮಾರ್ ತಿಳಿಸಿದ್ದಾರೆ.
ಅರ್ಹ ಮತ್ತು ನೋಂದಾಯಿತ ಕೂಲಿಕಾರ್ಮಿಕರು ಸೌಲಭ್ಯವನ್ನು ಪಡೆದುಕೊಳ್ಳಬಹುದು. ಮ-ನರೇಗಾ ಯೋಜನೆಯಡಿ ಗ್ರಾಮೀಣ ಪ್ರದೇಶ ಪ್ರತಿ ಅರ್ಹ ಕುಟುಂಬಕ್ಕೆ ಆರ್ಥಿಕ ವರ್ಷದಲ್ಲಿ 100 ದಿನಗಳ ಕೂಲಿ ಕೆಲಸದ ಖಾತ್ರಿ ನೀಡಿದೆ. ಒಂದು ಕುಟುಂಬ ನೂರು ದಿನ ಕೆಲಸ ಮಾಡಿದರೆ 37,000 ರೂ.ಗಳನ್ನು ಪಡೆದುಕೊಳ್ಳಬಹುದು. ಗಂಡು ಹೆಣ್ಣಿಗೆ ದಿನಕ್ಕೆ 370 ರೂ.ಗಳ ಸಮಾನ ಕೂಲಿ ಪಾವತಿಸಲಾಗುತ್ತಿದೆ ಎಂದು ತಿಳಿಸಿದರು.
ಗ್ರಾಮೀಣ ಭಾಗದಲ್ಲಿ ದುಡಿಯುವವರೇ ಇಲ್ಲವಾಗಿದೆ. ಇಂತಹ ವೇಳೆ ಜಿಲ್ಲಾ ಪಂಚಾಯಿತಿ ಸಾಕಷ್ಟು ಕಾರ್ಯಕ್ರಮಗಳನ್ನು ಮೂಡಿಸಿ ಅರಿವು ಮೂಡಿಸಿ ಹಲವು ಸೌಲಭ್ಯದ ನೆರವು ನೀಡಿದ ಬಳಿಕ ಹೆಚ್ಚಿನ ಜನರು ಇತ್ತ ಮುಖ ಮಾಡಿದ್ದಾರೆ. ಇಂತಹ ವೇಳೆ ಕೂಲಿ ಹೆಚ್ಚಳದಿಂದ ಇನ್ನಷ್ಟು ಜನರು ಇದರ ಲಾಭ ಪಡೆಯುವ ನಿಟ್ಟಿನಲ್ಲಿ ಈ ಹೆಚ್ಚಳ ಸದುಪಯೋಗವಾಗಲಿದೆ. ಇದನ್ನು ಸಾರ್ವಜನಿಕರು ಹೆಚ್ಚಿನ ರೀತಿಯಲ್ಲಿ ಬಳಸಿಕೊಳ್ಳಬೇಕು.
ಡಾ.ಎಂ.ಕೃಷ್ಣರಾಜು, ಉಪಕಾರ್ಯದರ್ಶಿ(ಅಭಿವೃದ್ಧಿ), ಜಿಲ್ಲಾ ಪಂಚಾಯಿತಿ
ಕಳೆದ ವರ್ಷವಷ್ಟೆ ಎಂ.ಕಾಂ. ಮುಗಿಸಿ ಮನೆಯಲ್ಲೇ ಕುಳಿತಿದ್ದ ನನಗೆ ಮ-ನರೇಗಾವು ಕೆಲಸದ ದಾರಿ ತೋರಿಸಿತು. ಈ ಮುಂಚೆ ರಜೆ ಅವಧಿಯಲ್ಲಿ ಕೂಲಿ ಕೆಲಸ ಮಾಡಿ ಅದರ ಹಣದಿಂದ ಕಾಲೇಜು ಫೀಸು ಕಟ್ಟಿದ್ದೆ. ಕೂಲಿ ಮೊತ್ತ ಈಗ 370 ರೂ.ಗೆ ಏರಿಕೆಯಾಗಿರುವುದು ನಮ್ಮಂತ ಯುವಕರಿಗೆ ದಾರಿದೀಪವಾಗಿದೆ.
ರವಿ ಕುಮಾರ್, ತಗಡೂರು, ನಂಜನಗೂಡು
ಉದ್ಯೋಗ ಖಾತ್ರಿಯ ಕೂಲಿ ಹೆಚ್ಚಳದಿಂದಾಗಿ ದುಡಿಮೆಗೆ ನಗರ ಪ್ರದೇಶಕ್ಕೆ ಹೋಗುವುದನ್ನು ತಪ್ಪಿಸಿದೆ. ಕೂಲಿ ಮೊತ್ತವು 349 ರಿಂದ 370 ರೂ.ಗೆ ಹೆಚ್ಚಳವಾಗಿರುವುದು ನಿಜಕ್ಕೂ ನಮಗೆ ಖುಷಿ ವಿಷಯ. ಕೂಲಿ ದರ ಏರಿಕೆಯಾಗಿರುವುದು ಇನ್ನಷ್ಟು ಕೆಲಸ ಮಾಡಲು ಪ್ರೇರೇಪಿಸಿದೆ.
ಎಸ್.ಮಂಜುನಾಥ್, ಕುರಿಹುಂಡಿ, ನಂಜನಗೂಡು
ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಹೆಚ್ಚಳ ಮಾಡಿರುವುದು ಸಂತಸದ ವಿಚಾರ. ನೂರು ದಿನಗಳ ಕಾಲ ದೊರಕುವ ಕೆಲಸವು ನನ್ನ ಉದ್ಯೋಗ ಕೊರತೆಯನ್ನು ತಪ್ಪಿಸಿದೆ. ಕೃಷಿ ಕೆಲಸಗಳು ಮುಗಿದ ಕೂಡಲೇ ನರೇಗಾ ಕೆಲಸದಲ್ಲಿ ತೊಡಗಿಕೊಳ್ಳುತ್ತೇನೆ. ಈಗಾಗಿ ವರ್ಷಪೂರ್ತಿ ದುಡಿಯುವ ಅವಕಾಶ ನನಗೆ ದೊರಕಿದೆ.
ಎಂ.ರಾಜ, ವರುಣ, ಮೈಸೂರು
ಪ್ರಸ್ತುತ ಪ್ರತಿಯೊಂದು ವಸ್ತುಗಳ ಬೆಲೆ ಏರಿಕೆಯಾಗಿದೆ. ಹಾಲು, ದಿನಸಿ ಮತ್ತು ತರಕಾರಿಯಂತಹ ಪ್ರತಿಯೊಂದು ವಸ್ತುವು ದುಬಾರಿಯಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ದರ ಹೆಚ್ಚಳ ಮಾಡಿರುವುದು ಸಂತಸ ತರಿಸಿದೆ.
ಸವಿತಾ, ಹೊಸ ಪೆಂಜಳ್ಳಿ, ಹುಣಸೂರು
ಉದ್ಯೋಗ ಖಾತ್ರಿ ಕೂಲಿ ಹೆಚ್ಚಳ ವಲಸೆಯನ್ನು ತಡೆಯಲು ಸಹಕಾರಿಯಾಗಿದೆ. ಕೆಲಸ ಮಾಡುವ ನಮ್ಮಂತವರಿಗೆ ಪ್ರಯೋಜನವಾಗಿದ್ದು, ವಲಸೆ ಹೋಗದೆ ಗ್ರಾಮದಲ್ಲೇ ದುಡಿದು ಜೀವನ ನಿರ್ವಹಣೆ ಮಾಡಲು ಸಹಕಾರಿಯಾಗಿದೆ. ಪ್ರತಿ ವರ್ಷ ಕೂಲಿ ಹೆಚ್ಚಳ ಮಾಡಿದರೆ ತುಂಬಾ ಅನುಕೂಲ.
ಸ್ವಾಮಿ, ಮೊತ್ತ ಗ್ರಾಮ, ಎಚ್.ಡಿ.ಕೋಟೆ