

ವಿಜಯವಾಣಿ ಸುದ್ದಿಜಾಲ ವಿಜಯಪುರ
ಕೇಂದ್ರ ಸರ್ಕಾರದ ಸಂಸತ್ ಸ್ಥಾಯಿ ಸಮಿತಿ ಸದಸ್ಯರು ದೇವನಹಳ್ಳಿ ತಾಲೂಕಿನ ಜಾಲಿಗೆ, ಕನ್ನಮಂಗಲ ಗ್ರಾಪಂ ಹಾಗೂ ವಿಜಯಪುರ ಹೋಬಳಿಯ ಮಂಡಿಬೆಲೆ ಗ್ರಾಪಂ ವ್ಯಾಪ್ತಿಯ ನರೇಗಾದಡಿ ಕೈಗೊಂಡ ಹಾಗೂ ಇನ್ನಿತರ ಅಭಿವೃದ್ಧಿ ಕಾಮಗಾರಿ ಪರಿಶೀಲನೆ ನಡೆಸಿದರು.
ತಂಡದಲ್ಲಿದ್ದ 15 ಮಂ ಸದಸ್ಯರು, ಮಂಡಿಬೆಲೆ ಗ್ರಾಪಂನಿಂದ ವಿವಿಧ ಕಾಮಗಾರಿ ಕುರಿತು ಪರಿಶೀಲಿಸಿದರು. ಅರಣ್ಯ ಇಲಾಖೆಯ ಸಹಯೋಗದಲ್ಲಿ ನರೇಗಾ ಯೋಜನೆಯಡಿ ನಾಟಿ ಮಾಡಿರುವ ಶ್ರೀಗಂಧದ ಮರಗಳನ್ನು ವೀಕ್ಷಣೆ ಮಾಡಿದರು.
ಬಳಿಕ ಮಂಡಿಬೆಲೆ ರೈತ ಕೃಷ್ಣಮೂರ್ತಿ ಅವರ 2.20 ಎಕರೆ ಪ್ರದೇಶದಲ್ಲಿ ಬೆಳೆದಿರುವ ಶ್ರೀಗಂಧದ ಮರಗಳು ಹಾಗೂ ಹೆಬ್ಬೇವಿನ ಬೆಳವಣಿಗೆ ಮತ್ತು ಕಟಾವಿನ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಅರಣ್ಯ ಇಲಾಖೆಯ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷವರ್ಧನ್ ಸದಸ್ಯರಿಗೆ ಮಾಹಿತಿ ಒದಗಿಸಿದರು. 200 ಶ್ರೀಗಂಧ ಮತ್ತು 200 ಹೆಬ್ಬೇವು ಗಿಡಗಳನ್ನು ರೈತರಿಗೆ ವಿತರಣೆ ಮಾಡಲಾಗಿದೆ. ನಾಟಿ ಮಾಡುವುದಕ್ಕಾಗಿ ಪಂಚಾಯಿತಿಯಿಂದ ನರೇಗಾ ಯೋಜನೆಯಡಿ ಆರ್ಥಿಕ ಸೌಲಭ್ಯ ಕಲ್ಪಿಸಲಾಗಿದೆ. ಶ್ರೀಗಂಧದ ಮರ 25 ವರ್ಷಕ್ಕೆ ಕಟಾವಿಗೆ ಬರುತ್ತದೆ. ಒಂದೊಂದು ಮರದಿಂದ ಸುಮಾರು 10 ಕೆಜಿಗೂ ಹೆಚ್ಚು ಶ್ರೀಗಂಧ ದೊರೆಯುತ್ತದೆ. ಈ ಬೆಳೆಯು ಪರಾವಲಂಬಿಯಾಗಿರುವ ಕಾರಣ, ಅಂತರ ಬೆಳೆಯಾಗಿ ಹೆಬ್ಬೇವು ನಾಟಿ ಮಾಡಲಾಗಿದೆ. 10 ವರ್ಷಗಳಿಂದಿಚೆಗೆ ರೈತರಿಗೆ ರಕ್ತಚಂದನ ಗಿಡ ವಿತರಣೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.