

ವಿಜಯಪುರ: ಆರು ತಿಂಗಳಿಂದ ನರೇಗಾ ಸಿಬ್ಬಂದಿ ಸಂಬಳಕ್ಕಾಗಿ ಪರದಾಡುತ್ತಿದ್ದು, ಕೂಡಲೇ ಸಂಬಳ ಪಾವತಿಸದೇ ಹೋದಲ್ಲಿ ಅಸಹಕಾರ ಚಳುವಳಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ಮಹಾತ್ಮ ಗಾಂಧಿ ನರೇಗಾ ನೌಕರರ ಸಂಘದ ಪದಾಧಿಕಾರಿಗಳು ತಿಳಿಸಿದರು.
ಶುಕ್ರವಾರ ಜಿಲ್ಲಾ ಪಂಚಾಯಿತಿ ಸಿಇಒ ರಿಷಿ ಆನಂದಗೆ ಮನವಿ ಸಲ್ಲಿಸಿದ ಸಂಘದ ಪದಾಧಿಕಾರಿಗಳು, ನರೇಗಾ ಯೋಜನೆಯಡಿ ವಿವಿಧ ಹಂತಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಕಳೆದ 6 ತಿಂಗಳಿಂದ ವೇತನವಿಲ್ಲದೇ ಪರದಾಡುತ್ತಿದ್ದಾರೆ. ಕೂಡಲೇ ವೇತನ ಪಾವತಿಸಬೇಕೆಂದು ವಿನಂತಿಸಿದರು.
ಸಂಘದ ಜಿಲ್ಲಾಧ್ಯಕ್ಷ ಪೃಥ್ವಿರಾಜ ಪಾಟೀಲ ಮಾತನಾಡಿ, ಕಳೆದ ಜನವರಿಯಿಂದ ವಿಜಯಪುರ ಸೇರಿ ರಾಜ್ಯವ್ಯಾಪ್ತಿ ಕೆಲಸ ಮಾಡುವ ಸಿಬ್ಬಂದಿಗೆ ವೇತನ ಪಾವತಿಯಾಗಿಲ್ಲ, ವೇತನ ಪಾವತಿಗಾಗಿ ವಿನಂತಿಸಿ ಹಲವಾರು ಬಾರಿ ಮೌಖಿಕವಾಗಿ, ಲಿಖಿತವಾಗಿ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೂ ಯಾವದೇ ರೀತಿಯ ಉಪಯೋಗವಾಗಿಲ್ಲ. ಶೀಘ್ರವಾಗಿ ವೇತನಕ್ಕಾಗಿ ಅಸಹಕಾರ ಚಳುವಳಿ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.
ಸಂಘದ ರಾಜ್ಯ ಉಪಾಧ್ಯಕ್ಷ ಸಾಹಿಲ್ ಧನಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಕಲ್ಲಪ್ಪ ನಂದರಗಿ, ಪ್ರವೀಣ ಭಾವಿಕಟ್ಟಿ, ಸಂಘಟನಾ ಕಾರ್ಯದರ್ಶಿ ಪರಶುರಾಮ ಶಹಾಪುರ, ವಿಶ್ವನಾಥ ಪಟ್ಟಣಶೆಟ್ಟಿ, ಅಮೃತಾ ನೀಲಜಗಿ, ಸುವರ್ಣಾ ಭಜಂತ್ರಿ, ಶಿಲ್ಪಾ ಗುತ್ತೇದಾರ, ಅಮೃತಾ ಕಿಟ್ಟದ ಮತ್ತಿತರರಿದ್ದರು.