ನರೇಗಾ ಯೋಜನೆ ಕೆಲಸಕ್ಕೆ ತೊಂದರೆ

30KMD-1
ಮಾದರಹಳ್ಳಿಯಲ್ಲಿ ಶಾಸಕ ಕದಲೂರು ಉದಯ್ ಅವರು ಪಿಡಿಒ ಅಶೋಕ್, ಕಾರ್ಯದರ್ಶಿ ಸುವರ್ಣ, ದ್ವಿತೀಯ ದರ್ಜೆ ಸಹಾಯಕಿ ಭವ್ಯ , ರಾಷ್ಟ್ರೀಯ ಜೂಡೋ ಪಟು ವಸುಂಧರಾ ಅವರನ್ನು ಸನ್ಮಾನಿಸಿದರು. ಸಂದರ್ಶ, ರಾಮಲಿಂಗಯ್ಯ, ಎ.ಎಸ್. ರಾಜೀವ್, ಪವಿತ್ರಾ, ದೇವಿರಮ್ಮ ಇದ್ದರು.
Published on

ಕೆ.ಎಂ.ದೊಡ್ಡಿ : ನರೇಗಾ ಯೋಜನೆಯಡಿ ಗ್ರಾಮಗಳಲ್ಲಿ ಹೆಚ್ಚಿನ ಕೆಲಸಗಳನ್ನು ನಡೆಸಲಾಗುತಿದ್ದು, ಕೆಲವರು ಅಭಿವೃದ್ಧಿ ಸಹಿಸದೆ ಕೆಲಸ ಕಾರ್ಯಗಳಿಗೆ ತೊಂದರೆ ಉಂಟು ಮಾಡುತ್ತಿದ್ದಾರೆ ಎಂದು ಶಾಸಕ ಕದಲೂರು ಉದಯ್ ಬೇಸರ ವ್ಯಕ್ತಪಡಿಸಿದರು.

ಸಮೀಪದ ಮಾದರಹಳ್ಳಿ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವತಿಯಿಂದ ಭಾರತ್ ನಿರ್ಮಾಣ್ ರಾಜೀವ್ ಗಾಂಧಿ ಸೇವಾ ಕೇಂದ್ರದ ನೂತನ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

ನರೇಗಾದಿಂದ ಗ್ರಾಮಗಳು ಸಾಕಷ್ಟು ಅಭಿವೃದ್ಧಿಯಾಗುತ್ತವೆ. ಆದರೆ ಅದನ್ನು ಸಹಿಸದೆ ಕೆಲವರು ಅಭಿವೃದ್ಧಿಗೆ ತೊಂದರೆ ಕೊಡುತ್ತಿದ್ದಾರೆ. ಇದರಿಂದ ಗ್ರಾಮಗಳ ಪ್ರಗತಿಗೆ ಹಿನ್ನಡೆ ಉಂಟಾಗುತ್ತಿದ್ದು ಅಭಿವೃದ್ಧಿ ವಿಚಾರಗಳಲ್ಲಿ ಕ್ಷುಲ್ಲಕ ರಾಜಕಾರಣ ಮಾಡಬೇಡಿ ಎಂದರು.

ಗ್ರಾಮಗಳ ಅಭಿವೃದ್ಧಿಗೆ ಗ್ರಾಮಸ್ಥರು ಪಕ್ಷಾತೀತವಾಗಿ, ಜಾತ್ಯತೀತವಾಗಿ ಸ್ಥಳೀಯ ಜನಪ್ರತಿನಿಧಿಗಳ ಜತೆ ಕೈಜೋಡಿಸಿದರೆ ಮಾತ್ರ ಗ್ರಾಮಗಳ ಅಭಿವೃದ್ಧಿ ಸಾಧ್ಯ, ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬದಿಗಿಡಬೇಕು ಎಂದು ಕಿವಿಮಾತು ಹೇಳಿದರು.

ಗ್ರಾಮದ ಅಭಿವೃದ್ಧಿಗೆ ಸ್ಥಳೀಯ ಗ್ರಾಮ ಪಂಚಾಯಿತಿಯ ಸದಸ್ಯರು ಒಗ್ಗಟ್ಟಿನಿಂದ ಸಹಕಾರ ನೀಡಿದರೆ ಮಾತ್ರ ಗ್ರಾಮದ ಅಭಿವೃದ್ಧಿ ಸಾಧ್ಯ. ಅಭಿವೃದ್ಧಿಯ ವಿಚಾರದಲ್ಲಿ ಗ್ರಾಮಸ್ಥರು ಹಾಗೂ ಚುನಾಯಿತ ಪ್ರತಿನಿಧಿಗಳೆಲ್ಲರು ಒಗ್ಗಟ್ಟಿನಿಂದ ಇರಬೇಕೆಂದರು.

ಮದ್ದೂರು ಅಭಿವೃದ್ಧಿ ವಿಚಾರದಲ್ಲಿ ಸದಾ ಮುನ್ನಡೆಯಲ್ಲಿದ್ದು ನೀರಾವರಿ ಯೋಜನೆಗಳಿಗೆ ಸರ್ಕಾರದಿಂದ ಹೆಚ್ಚಿನ ಅನುದಾನಗಳನ್ನು ತಂದಿದ್ದೇನೆ. ಕಳೆದ ಸಚಿವ ಸಂಪುಟದಲ್ಲಿ ಸೂಳೆಕೆರೆ ನಾಲೆಯ ವ್ಯಾಪ್ತಿಯ ಕಾಮಗಾರಿಗೆ 45 ಕೋಟಿ ರೂ., ಸೂಳೆಕೆರೆ ಅಭಿವೃದ್ಧಿಗೆ ಹಾಗೂ ಹೂಳೆತ್ತುವ ಕಾರ್ಯಕ್ಕೆ 34 ಕೋಟಿ ರೂ. ಸೇರಿ ಒಟ್ಟು 77 ಕೋಟಿ ರೂ. ಅನುದಾನ ಬಿಡುಗಡೆಗೆ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆತಿದ್ದು ರೈತರ ಕಲ್ಯಾಣಕ್ಕಾಗಿ ನೀರಾವರಿ ಯೋಜನೆಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ ಎಂದರು.

ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ವತಿಯಿಂದ ರಸ್ತೆ ಮತ್ತು ಚರಂಡಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆಗೊಂಡಿದ್ದು ಕ್ಷೇತ್ರದ ಹಲವಾರು ಗ್ರಾಮಗಳಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಲು ವಿವಿಧ ರಸ್ತೆ ಮತ್ತು ಚರಂಡಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಗುತ್ತಿದೆ ಎಂದರು.

ಮದ್ದೂರು ಕ್ಷೇತ್ರದಲ್ಲಿ ಸಾಧನ ಸಮಾವೇಶದ ನಂತರ ಕ್ಷೇತ್ರದ ಅಭಿವೃದ್ಧಿಗಾಗಿ 300 ಕೋಟಿ ರೂ.a ಅನುದಾನ ಬಿಡುಗಡೆಯಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಕ್ಷೇತ್ರದಲ್ಲಿನ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.

ಪಿಡಿಒ ಅಶೋಕ್, ಕಾರ್ಯದರ್ಶಿ ಸುವರ್ಣ, ದ್ವಿತೀಯ ದರ್ಜೆ ಸಹಾಯಕಿ ಭವ್ಯಾ, ರಾಷ್ಟ್ರೀಯ ಜೂಡೋ ಪಟು ವಸುಂಧರ ಅವರನ್ನು ಗ್ರಾಮ ಪಂಚಾಯಿತಿ ವತಿಯಿಂದ ಸನ್ಮಾನಿಸಲಾಯಿತು. ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದರ್ಶ, ತಾಲೂಕು ಪಂಚಾಯಿತಿ ಇಒ ರಾಮಲಿಂಗಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್. ರಾಜೀವ್, ಗ್ರಾ.ಪಂ. ಅಧ್ಯಕ್ಷೆ ಪವಿತ್ರಾ, ಮಾಜಿ ಅಧ್ಯಕ್ಷರಾದ ದೇವಿರಮ್ಮ, ಎಂ.ವಿ. ಕೃಷ್ಣ, ಉಪಾಧ್ಯಕ್ಷ ಶಿವಲಿಂಗಯ್ಯ, ಮಾಜಿ ಉಪಾಧ್ಯಕ್ಷ ಉಮೇಶ್, ಸದಸ್ಯರಾದ ಕೆ.ಪಿ.ರಕ್ಷಿತ್ ಕುಮಾರ್, ಎ.ಸಿ.ಮಹೇಶ್, ಗೀತಾ, ಸುಧಾ, ಚನ್ನವೀರೇಗೌಡ, ಸಿದ್ದಶೆಟ್ಟಿ, ಲಕ್ಷ್ಮೀ, ರತ್ನಮ್ಮ, ಮಂಜುಳಾ, ರೇಣುಕಮ್ಮ, ಪೂರ್ಣಿಮಾ, ಮಂಚಶೆಟ್ಟಿ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net