

ಮಂಡ್ಯ: ಮಾನವ ದಿನ ಕಡಿಮೆ ಇರುವ ಗ್ರಾಮ ಪಂಚಾಯಿತಿಯಲ್ಲಿ ವಿಶೇಷ ಚಟುವಟಿಕೆಯನ್ನು ಆಯೋಜಿಸಿ, ನರೇಗಾ ಯೋಜನೆಯ ಪ್ರಗತಿ ಸಾಧಿಸಲು ಅಧಿಕಾರಿಗಳು ಕ್ರಮವಹಿಸಬೇಕು. ಈ ಮೂಲಕ ಗ್ರಾಮ ಪಂಚಾಯಿತಿಗೆ ನಿಗದಿಪಡಿಸಿರುವ ಗುರಿಗೆ ಅನುಗುಣವಾಗಿ ಮಾನವದಿನ ಸೃಜಿಸಿ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ ಸೂಚಿಸಿದರು.
ನಗರದ ಜಿಪಂ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ನರೇಗಾ ಯೋಜನೆಯ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಸಕ್ರಿಯವಾಗಿ ಕೂಲಿಕಾರರು ಕೆಲಸದಲ್ಲಿ ತೊಡಗಿರುವಂತೆ ಉದ್ಯೋಗ ನೀಡಬೇಕು. ಎನ್‌ಎನ್‌ಎಂಎಸ್ ಪರಿಶೀಲನೆಯನ್ನು ಕಡ್ಡಾಯವಾಗಿ ಪರಿಶೀಲನೆ ನಡೆಸಬೇಕು. ಈ ಹಿಂದಿನ ಸಾಲಿನಲ್ಲಿ ಪ್ರಗತಿಯಲ್ಲಿರುವ ಕೂಲಿ ಆಧಾರಿತ ಕಾಮಗಾರಿಗಳನ್ನು ಬಾಕಿ ಇರುವ ಮಾನವ ದಿನ ಸೃಜಿಸಿ ಮೇ ಅಂತ್ಯಕ್ಕೆ ಪೂರ್ಣಗೊಳಿಸಿ ಕಾಮಗಾರಿ ಮುಕ್ತಾಯಗೊಳಿಸುವಂತೆ ತಿಳಿಸಿದರು.
ಹಿಂದಿನ ವರ್ಷದಲ್ಲಿ ಬಾಕಿ ಇರುವ ಕಾಮಗಾರಿಗಳನ್ನು ಮುಕ್ತಾಯಗೊಳ್ಳಿಸಲು ಕ್ರಮವಹಿಸಬೇಕು. ಜಿಲ್ಲೆಗೆ ನಿಗದಿಪಡಿಸಿರುವ ಗುರಿಗೆ ಅನುಗುಣವಾಗಿ ಬೂದು ನೀರು ನಿರ್ವಹಣೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆ ಸ್ಥಳ ಪರಿಶೀಲನೆ ನಡೆಸಿ ನಿಯಮಾನುಸಾರ ಕಾಮಗಾರಿ ಪ್ರಾರಂಭ ಮಾಡಬೇಕು ಎಂದು ತಿಳಿಸಿದರು.
ಕಾಲಕಾಲಕ್ಕೆ ಸಾಮಾಜಿಕ ಲೆಕ್ಕ ಪರಿಶೋಧನೆ ಸಭೆ ನಡೆಸಿ ಆಕ್ಷೇಪ ಪ್ರಕರಣದ ಕಾಮಗಾರಿಗಳನ್ನು ತೀರುವಳಿಗೊಳಿಸಿ ಮುಕ್ತಾಯಗೊಳಿಸಲು ಮತ್ತು ಪ್ರಗತಿ ಹಂತದಲ್ಲಿರುವ ಸಂಜೀವಿನಿ ಶೆಡ್‌ಗಳನ್ನು ಪೂರ್ಣಗೊಳಿಸಲು ಕ್ರಮವಹಿಸಬೇಕು. ನರೇಗಾ ಯೋಜನೆಯಡಿ ರಸ್ತೆ ಬದಿ ನೆಡುತೋಪುಗಳಲ್ಲಿ ಗಿಡಗಳನ್ನು ನೆಡುವುದಕ್ಕೆ ಜಾಗಕ್ಕೆ ಅನುಗುಣವಾಗಿ ನರ್ಸರಿ ಗಿಡಗಳನ್ನು ನಿರ್ವಹಣೆ ಮಾಡಲು ನರೇಗಾ ಕೂಲಿಕಾರರು ಕೆಲಸ ನಿರ್ವಹಿಸಬೇಕು. ಕೃಷಿ ಇಲಾಖೆಯಡಿ ನರೇಗಾ ಯೋಜನೆಯ ಬದು ನಿರ್ಮಾಣ ಕಾಮಗಾರಿಗಳ ಪ್ರಗತಿ ಸಾಧಿಸಲು ಸೂಚಿಸಿದರು.
ಸಭೆಯಲ್ಲಿ ಉಪ ಕಾರ್ಯದರ್ಶಿ(ಅಭಿವೃದ್ಧಿ) ಲಕ್ಷ್ಮೀ, ಸಹಾಯಕ ಕಾರ್ಯದರ್ಶಿ( ಅಭಿವೃದ್ಧಿ) ಚಂದ್ರ, ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ನರೇಗಾ ಯೋಜನೆ ಸಿಬ್ಬಂದಿ ಹಾಜರಿದ್ದರು.