

ಗದಗ: ವೇತನ ಪಾವತಿಸುವಂತೆ ಆಗ್ರಹಿಸಿ ಉದ್ಯೋಗ ಖಾತರಿ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ನೂರಾರು ಹೊರಗುತ್ತಿಗೆ ನೌಕರರು ಮತ್ತು ಗ್ರಾಮ ಕಾಯಕ ಮಿತ್ರರು ನಗರದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಸೋಮವಾರ ಪ್ರತಿಭಟನೆ ಸಲ್ಲಿಸಿದರು.
ನರೇಗಾ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಬಾಳಿಕಾಯಿ ಮಾತನಾಡಿ, ಯೋಜನೆಯಡಿ ಜಿಲ್ಲಾ ಹಂತದಲ್ಲಿ ಎಡಿಪಿಸಿ, ಡಿಎಂಐಎಸ್, ಡಿಐಇಸಿ, ಡಿಎಎಂ ತಾಲೂಕು ಹಂತದಲ್ಲಿ ಟಿಐಇಸಿ, ಟಿಸಿ, ಟಿಎಂಐಎಸ್, ಟಿಎಇ (ಸಿವಿಲ್, ತೋಟಗಾರಿಕೆ, ರೇಷ್ಮೆ, ಅರಣ್ಯ, ಕೃಷಿ) ವಿಭಾಗದಲ್ಲಿ ಹಾಗೂ ಗ್ರಾಮ ಕಾಯಕ ಮಿತ್ರರು ಸೇರಿ ವಿವಿಧ ಹುದ್ದೆಗಳಲ್ಲಿ 130ಕ್ಕೂ ಹೆಚ್ಚು ಜನ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಎಲ್ಲ ಸಿಬ್ಬಂದಿಗೆ ಕಳೆದ 5 ತಿಂಗಳಿಂದ ವೇತನ ಪಾವತಿಯಾಗಿಲ್ಲ ಎಂದರು.
ಗ್ರಾಮೀಣಾಭಿವೃದ್ಧಿಯಲ್ಲಿ ಉದ್ಯೋಗ ಖಾತರಿ ಯೋಜನೆ ಮಹತ್ತರ ಪಾತ್ರ ವಹಿಸಿದೆ. ಕೂಲಿಕಾರರಿಗೆ ನರೇಗಾ ಕೆಲಸ ಕೊಡಿಸುವುದು, ಹಳ್ಳಿಗಳಲ್ಲಿ ಆಸ್ತಿ ಸೃಜನೆಗಳಲ್ಲಿ ನೌಕರರ ಪಾತ್ರ ಮುಖ್ಯವಾಗಿದೆ. ಆದರೆ, ನೌಕರರಿಗೆ ಪ್ರತಿ ತಿಂಗಳು ವೇತನ ಪಾವತಿ ಆಗದಿರುವುದರಿಂದ ಮಕ್ಕಳ ಶಿಕ್ಷಣ, ಕುಟುಂಬದ ನಿರ್ವಹಣೆ, ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆಯಲು ತೊಂದರೆಯಾಗುತ್ತಿದೆ ಎಂದರು.
ರಾಜ್ಯ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಕುಮಾರ ಪೂಜಾರ ಮಾತನಾಡಿ, ಒಂದೆರಡು ತಿಂಗಳು ವೇತನ ಆಗದಿದ್ದರೆ ಸಮಸ್ಯೆ ಆಗುತ್ತದೆ. ಅಂತಹದರಲ್ಲಿ ಐದು ತಿಂಗಳಿನಿಂದ ವೇತನವಿಲ್ಲದೆ ಕೆಲಸ ನಿರ್ವಹಣೆ ಮಾಡುತ್ತಿರುವುದು ಶ್ಲಾಘನೀಯ. ಸರ್ಕಾರ ಕೂಡಲೇ ನ್ಯಾಯಯುತ ಬೇಡಿಕೆ ಈಡೇರಿಸಬೇಕು. ನರೇಗಾ ಅನುಷ್ಠಾನಕ್ಕೆ ಈ ಎಲ್ಲ ನೌಕರರು ಅವಶ್ಯವಾಗಿದ್ದಾರೆ. ಆದ್ದರಿಂದ ಸರ್ಕಾರ ವೇತನ ಪಾವತಿ ವಿಳಂಬವಾಗದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ರಾಜ್ಯ ಗ್ರಾಪಂ ಸದಸ್ಯರ ಸಂಘದ ಜಿಲ್ಲಾಧ್ಯಕ್ಷ ಸೋಮರಡ್ಡಿ ನಡವೂರ ಮಾತನಾಡಿ, ನರೇಗಾ ನೌಕರರ ಸಂಘದ ಬೇಡಿಕೆಗಳು ನ್ಯಾಯಯುತವಾಗಿವೆ. ನಿಮ್ಮ ಹೋರಾಟದಲ್ಲಿ ನಮ್ಮ ಗ್ರಾಪಂ ಸದಸ್ಯರ ಸಂಘದ ವತಿಯಿಂದ ಮುಂದೆಯೂ ಬೆಂಬಲ ಇರುತ್ತದೆ ಎಂದರು.
ಜಿಲ್ಲಾ ಸಂಘದ ನಿಕಟ ಪೂರ್ವ ಅಧ್ಯಕ್ಷ ಲಿಂಗರಾಜ ಮುದಿಗೌಡ್ರ ಮಾತನಾಡಿ, ವೇತನ ವಿಳಂಬ ಅನೇಕ ಸಮಸ್ಯೆಗಳಿಗೆ ಕಾರಣವಾಗಿದೆ. ರಾಜ್ಯ ಬಜೆಟ್‌ನಲ್ಲಿ ನರೇಗಾ ನೌಕರರಿಗೆ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸುವ ಆದೇಶ ಹೊರಡಿಸಿದ್ದಾರೆ. ಜೀವನ ಭದ್ರತೆ ಇಲ್ಲದೇ ಕೆಲಸ ಮಾಡುತ್ತಿರುವ ನರೇಗಾ ನೌಕರರಿಗೆ ಆರೋಗ್ಯ ವಿಮೆ ಸೌಲಭ್ಯ ಸಿಗುವುದು ಅಗತ್ಯವಾಗಿದೆ ಎಂದರು.
ಇದೇ ವೇಳೆ ನೌಕರರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ನಂತರ ರ್ಯಾಲಿ ಮೂಲಕ ತೆರಳಿ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದರು. ಸಂಘದ ಜಿಲ್ಲಾ ಉಪಾಧ್ಯಕ್ಷ ಸಿದ್ದು ಗುಡಿಮನಿ, ಅರುಣ ಸಿಂಗ್ರಿ, ಪ್ರವೀಣ ಸೂಡಿ, ವೀರೇಶ ಬಸನಗೌಡ್ರ, ವಿಜಯಲಕ್ಷ್ಮೀ ಅಂಗಡಿ, ರೇಷ್ಮಾ ಕೇಳೂರ, ಮಂಜುನಾಥ ಹಳ್ಳದ, ಗ್ರಾಮ ಕಾಯಕ ಮಿತ್ರರು ಇತರರು ಇದ್ದರು.
ರಾಜ್ಯಾದ್ಯಂತ ಸಮಸ್ಯೆ ಉದ್ಭವವಾಗಿದೆ. ಸರ್ಕಾರದ ಮಟ್ಟದಲ್ಲಿ ಇದನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು. ಸಿಬ್ಬಂದಿ ಸಮಸ್ಯೆಗಳನ್ನು ಆದಷ್ಟು ಬೇಗ ಬಗೆಹರಿಸಲಾಗುವುದು. ಭರತ್ ಎಸ್., ಜಿಪಂ ಸಿಇಒ