

ರಾಯಚೂರು ಯುಕ್ತದಾರ ತಂತ್ರಾಂಶವು ವಿಶೇಷ ಸಾಧನೆಗಳನ್ನು ಒಳಗೊಂಡಿದ್ದು, ಹಿಂದಿನ ಸ್ವತ್ತುಗಳನ್ನು ವಿಶ್ಲೇಷಿಸಲು ಮತ್ತು ಹೊಸ ಯೋಜನೆಗಳನ್ನು ಗುರುತಿಸಲು ಸಹಾಯ ಮಾಡುತ್ತದೆಂದು ಜಿಪಂ ಸಿಇಓ ಈಶ್ವರ್ ಕಾಂದೂ ಹೇಳಿದರು.
ನಗರದ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಬುಧವಾರ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಜಲಾನಯನ ಮಾದರಿಯಲ್ಲಿ ವೈಜ್ಞಾನಿಕವಾಗಿ ಯೋಜನೆಯನ್ನು ಸಿದ್ಧಪಡಿಸಲು ಯುಕ್ತಧಾರ ತಂತ್ರಾಂಶದ ಕುರಿತು ಒಂದು ದಿನದ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿ, ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕಾಮಗಾರಿ ತೆಗೆದುಕೊಂಡ ಬಳಿಕ ಪೂರ್ಣಗೊಳಿಸದೇ ಇರುವುದರಿಂದ ಸಾಕಷ್ಟು ದೂರುಗಳು ಕೇಳಿ ಬರುತ್ತಿರುವದನ್ನು ತಪ್ಪಿಸಲು ಮತ್ತು ಯೋಜನೆಯನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಲು ಯುಕ್ತಧಾರ ತಂತ್ರಾಂಶವು ಸಹಕಾರಿಯಾಗಲಿದೆ ಎಂದರು.
ನರೇಗಾ ಯೋಜನೆಯಡಿ ಜಲಾನಯನ ಮಾದರಿಯಲ್ಲಿ ವೈಜ್ಞಾನಿಕವಾಗಿ ಯೋಜನೆಯನ್ನು ಸಿದ್ದಪಡಿಸಲು ಯುಕ್ತಧಾರ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲಾಗಿದೆ. ಕೇಂದ್ರ ಗ್ರಾಮೀಣ ಅಭಿವೃದ್ಧಿ ಮಂತ್ರಾಲಯದ ನಿರ್ದೇಶನದಂತೆ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಜಿಐಎಸ್ ಆಧಾರಿತ ಕಾಮಗಾರಿಗಳನ್ನು ಯುಕ್ತದಾರ ತಂತ್ರಾಂಶದಲ್ಲಿ ವೈಜ್ಞಾನಿಕವಾಗಿ ತಯಾರಿಸಬೇಕಾಗುತ್ತದೆ ಎಂದರು.
ಮಹಾತ್ಮ ಗಾಂಧಿ ನರೇಗಾ, ನೈಸರ್ಗಿಕ ಸಂಪನ್ಮೂಲ ನಿರ್ವಹಣಾ ಕಾಮಗಾರಿಗಳು ಮತ್ತು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಗಳಂತಹ ವಿವಿಧ ಕಾರ್ಯಕ್ರಮಗಳಡಿ ನಿರ್ಮಿಸಲಾದ ಸ್ವತ್ತುಗಳೊಂದಿಗೆ ಇದು ಕಾರ್ಯನಿರ್ವಹಿಸುತ್ತದೆ ಹಾಗೂ ಯುಕ್ತದಾರ ತಂತ್ರಾಂಶವು ವಿಶ್ಲೇಷಣ ಸಾಧನೆಗಳನ್ನು ಒಳಗೊಂಡಿದ್ದು, ಹಿಂದಿನ ಸ್ವತ್ತುಗಳನ್ನು ವಿಶ್ಲೇಷಿಸಲು ಮತ್ತು ಹೊಸ ಯೋಜನೆಗಳನ್ನು ಗುರುತಿಸಲು ಸಹಾಯ ಮಾಡುತ್ತದೆ ಎಂದರು.
ತರಬೇತಿಯಲ್ಲಿ ಯಾವುದೇ ಸಮಸ್ಯೆ ಇದ್ದಲ್ಲಿ ತಿಳಿಸಿದಲ್ಲಿ ಆ ಕರಿತು ರಾಜ್ಯ ಮಟ್ಟದ ಸಭೆಯಲ್ಲಿ ಹೇಳಿ ಪರಿಹರಿಸುವ ಕೆಲಸ ಮಾಡಲಾಗುತ್ತದೆ. ಈಗಾಗಲೇ ಕಪಗಲ್, ಚಿಂಚರಕಿ ಸೇರಿ 3 ಗ್ರಾಮ ಪಂಚಾಯತಿಗಳು ಈ ತಂತ್ರಾಂಶವನ್ನು ಅನುಷ್ಠಾನ ಮಾಡಿದ್ದು, ಯಾವುದೇ ಸಮಸ್ಯೆ ಕಂಡು ಬಂದಿಲ್ಲ, ಸಮಸ್ಯೆಗಳು ಕುರಿತು ಮುಂಚಿತವಾಗಿ ಮಾಹಿತಿ ನೀಡಬೇಕೆಂದರು. ಈ ಸಂದರ್ಭದಲ್ಲಿ ಜಿಪಂ ಪಿಡಿ ಶರಣಬಸವರಾಜ, ತಾಪಂ ಇಓಗಳಾದ ಶಶಿಧರಸ್ವಾಮಿ, ಚಂದ್ರಶೇಖರ ಪವಾರ ಸೇರಿ ಅನೇಕರು ಇದ್ದರು.