ನರೇಗಾ ಗುರಿ ಸಾಧನೆಯತ್ತ ಚಿತ್ತ

Narega kamagari
Published on

ಮಂಜುನಾಥ ಎಸ್. ಅಂಗಡಿ ಧಾರವಾಡ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಎಂಎನ್​ಆರ್​ಇಜಿಎಸ್-ನರೇಗಾ)ಯಡಿ ಧಾರವಾಡ ಜಿಲ್ಲೆ ಶೇ. 72ರಷ್ಟು ಪ್ರಗತಿ ಸಾಧಿಸಿದ್ದು, ಪ್ರಸಕ್ತ ಆರ್ಥಿಕ ವರ್ಷದ ಅಂತ್ಯಕ್ಕೆ ಪೂರ್ಣ ಪ್ರಮಾಣದ ಗುರಿ ಮುಟ್ಟಲು ಚಿತ್ತ ನೆಟ್ಟಿದೆ.

ಪ್ರಸಕ್ತ ವರ್ಷ ಧಾರವಾಡ ಜಿಲ್ಲೆಗೆ 25 ಲಕ್ಷ ಮಾನವ ದಿನಗಳ ಸೃಜನೆಯ ಗುರಿ ನಿಗದಿಪಡಿಸಲಾಗಿದೆ. ಫೆ. 10ರವರೆಗೆ 18.13 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ.

ಜಿಲ್ಲಾದ್ಯಂತ ನರೇಗಾ ಕಾಮಗಾರಿಗಳು ಭರದಿಂದ ಸಾಗಿದ್ದು, ಮಾರ್ಚ್ ಅಂತ್ಯಕ್ಕೆ ಶೇ. 98ರಷ್ಟು ಗುರಿ ಸಾಧಿಸುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಳೆದ 6 ಆರ್ಥಿಕ ವರ್ಷಗಳಲ್ಲಿ ಜಿಲ್ಲೆಯ ಸಾಧನೆ ಶೇ. 89ರಿಂದ 101 ರಷ್ಟಿದೆ.

ಗ್ರಾಮೀಣ ಭಾಗದ ಜನರಿಗೆ ನರೇಗಾ ವರದಾನವಾಗಿದೆ. ಸದ್ಯ ರೈತರು ಹಿಂಗಾರು ಬೆಳೆಗಳನ್ನು ಕಟಾವು ಮಾಡಿದ್ದು, ಜಮೀನುಗಳಲ್ಲಿ ಫಸಲು ಇಲ್ಲ. ನರೇಗಾ ಯೋಜನೆಯಡಿ ಕೃಷಿ ಹೊಂಡ, ಬದುವು ನಿರ್ವಣ, ಕೆರೆ ಮತ್ತು ಹಳ್ಳ ಹೂಳೆತ್ತುವ ಕಾಮಗಾರಿಗಳು ಪ್ರಗತಿಯಲ್ಲಿವೆ. ಹೀಗಾಗಿ ಮಾನವ ದಿನಗಳ ಸೃಜನೆಯ ಅಂಕಿ- ಅಂಶ ದಿನೇದಿನೆ ಹೆಚ್ಚುತ್ತಿದೆ.

ಜಿಪಂ ನೂತನ ಸಿಇಒ ಭುವನೇಶ ಪಾಟೀಲ ಹಾಗೂ ಉಪ ಕಾರ್ಯದರ್ಶಿ ಬಿ.ಎಸ್. ಮೂಗನೂರಮಠ ನರೇಗಾ ಕಾಮಗಾರಿಗಳ ಮೇಲುಸ್ತುವಾರಿ ವಹಿಸಿ, ಮಾರ್ಚ್ ಅಂತ್ಯದವರೆಗೆ ಪಿಡಿಒಗಳಿಗೆ ಮಾನವ ದಿನಗಳ ಸೃಜನೆಯ ಗುರಿ ಸಾಧಿಸುವಂತೆ ಸೂಚಿಸಿದ್ದಾರೆ.

ಗ್ರಾಮೀಣ ಭಾಗದ ಜನರಿಗೆ ಸ್ವಂತ ಊರಲ್ಲೇ ಉದ್ಯೋಗ ನೀಡುವ ಕೇಂದ್ರ ಸರ್ಕಾರದ ಯೋಜನೆಯನ್ನು ರಾಜ್ಯ ಸರ್ಕಾರ ಅನುಷ್ಠಾನಗೊಳಿಸುತ್ತಿದೆ. ಗ್ರಾಮೀಣ ಪ್ರದೇಶದ ವಯಸ್ಕರಿಗೆ ಆರ್ಥಿಕ ವರ್ಷದಲ್ಲಿ ಕನಿಷ್ಠ 100 ದಿನ ಸ್ಥಳೀಯವಾಗಿ ಉದ್ಯೋಗ ನೀಡುವುದು, ಬಡ ಜನರು ಉದ್ಯೋಗ ಅರಸಿ ಬೇರೆ ಜಿಲ್ಲೆ- ರಾಜ್ಯಗಳಿಗೆ ಗುಳೆ ಹೋಗುವುದನ್ನು ತಪ್ಪಿಸುವುದು ಯೋಜನೆಯ ಉದ್ದೇಶ. ಅಭಿವೃದ್ಧಿ ಕಾರ್ಯ ಕೈಗೊಳ್ಳುವುದರ ಜತೆಗೆ ಆರ್ಥಿಕ ವರ್ಷಕ್ಕೆ ಮಾನವ ದಿನಗಳನ್ನು ಸೃಜಿಸುವಂತೆ ರಾಜ್ಯ ಸರ್ಕಾರದಿಂದ ಗುರಿ ನಿಗದಿಪಡಿಸಲಾಗಿದೆ.

ಯಾವ ಯಾವ ಕಾಮಗಾರಿಗಳು?

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ, ಶಾಲಾ ಶಿಕ್ಷಣ ಇಲಾಖೆ ಸೇರಿ ಇನ್ನಿತರ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ. ನೋಂದಾಯಿತ ಕೂಲಿಕಾರರನ್ನು ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳಿಗೆ ಬಳಸಿಕೊಳ್ಳಲಾಗುತ್ತದೆ. ಕೆರೆ, ನಾಲಾ, ಹಳ್ಳ ಹೂಳೆತ್ತುವುದು, ಸಿಸಿ ರಸ್ತೆ, ಮೋರಂ ರಸ್ತೆ ನಿರ್ವಣ, ಶಾಲೆ- ಅಂಗನವಾಡಿಗಳಿಗೆ ಕಾಂಪೌಂಡ್ ನಿರ್ಮಾಣ ಮತ್ತು ಅಡುಗೆ ಕೋಣೆ ನಿರ್ವಣ, ಆಟದ ಮೈದಾನ ಅಭಿವೃದ್ಧಿಪಡಿಸುವುದು, ಸ್ಮಶಾನ ಅಭಿವೃದ್ಧಿ, ರಸ್ತೆ ಬದಿ- ಶಾಲಾ ಆವರಣದಲ್ಲಿ ಸಸಿ ನೆಡುವ ಕಾಮಗಾರಿಗಳಿಗೆ ಕೂಲಿಕಾರರ ಬಳಕೆಯಾಗುತ್ತದೆ. ವೈಯಕ್ತಿಕ ಕಾಮಗಾರಿಗಳಾದ ಕುರಿ- ದನ, ಕೋಳಿ ಶೆಡ್ ನಿರ್ವಣ, ಇಂಗು ಗುಂಡಿ ನಿರ್ವಣ, ಕೃಷಿ ಹೊಂಡ, ಜಮೀನಿನಲ್ಲಿ ಬದುವು ನಿರ್ಮಾಣ ಸೇರಿ ಇತರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ.

ನರೇಗಾ ಕಾಮಗಾರಿ ಕೈಗೊಂಡು ನಿಗದಿತ ಗುರಿ ಸಾಧಿಸಲು ಪಿಡಿಒಗಳಿಗೆ ಸೂಚಿಸಲಾಗಿದೆ. ಆರ್ಥಿಕ ವರ್ಷದ ಗುರಿ ಸಾಧನೆಗೆ ಒಂದೂವರೆ ತಿಂಗಳ ಕಾಲಾವಕಾಶವಿದೆ. ಕಡಿಮೆ ಕಾರ್ಯಕ್ಷಮತೆ ತೋರಿರುವ ಪಿಡಿಒಗಳಿಗೆ ಎಚ್ಚರಿಕೆ ನೀಡಲಾಗಿದ್ದು, ಗುರಿ ಸಾಧಿಸುವವರನ್ನು ಅಭಿನಂದಿಸಲಾಗುವುದು.| ಭುವನೇಶ ಪಾಟೀಲ ಜಿಪಂ ಸಿಇಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net