ಮಹಿಳಾ ಸಬಲೀಕರಣಕ್ಕೆ ನರೇಗಾ ಸಹಕಾರಿ

NREGA helps in women empowerment
Published on

ರಟ್ಟಿಹಳ್ಳಿ: ಗ್ರಾಮೀಣ ಪ್ರದೇಶದ ಮಹಿಳೆಯರ ಜೀವನ ಸುಧಾರಣೆಗೆ ಮತ್ತು ಅವರ ಕುಟುಂಬಕ್ಕೆ ಆರ್ಥಿಕ ಶಕ್ತಿ ನೀಡಲು ನರೇಗಾ ಯೋಜನೆಯಡಿ ವಿಶೇಷ ರಿಯಾಯತಿ ಮತ್ತು ಸೌಲಭ್ಯ ಕಲ್ಪಿಸಲಾಗಿದೆ. ಮಹಿಳೆಯರು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಪಂ ಸಹಾಯಕ ನಿರ್ದೇಶಕ ಪ್ರದೀಪ್ ಗಣೇಶ್ಕರ್ ಅವರು ಹೇಳಿದರು.

ತಾಲೂಕಿನ ನಾಗವಂದ ಗ್ರಾಮದಲ್ಲಿ ಜಿಪಂ, ತಾಪಂ, ಗ್ರಾಪಂ ಸಹಯೋಹದಲ್ಲಿ ಆಯೋಜಿಸಿದ್ದ ಸ್ತ್ರೀ ಚೇತನ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನರೇಗಾ ಯೋಜನೆಯಡಿ ಮಹಿಳಾ ಭಾಗವಹಿಸುವಿಕೆ ಹೆಚ್ಚಿಸಲು ವಿಶೇಷ ರಿಯಾಯತಿ ಕಲ್ಪಿಸಲಾಗಿದೆ.ನರೇಗಾ ಕಾಮಗಾರಿ ಕೆಲಸದಲ್ಲಿ ಗರ್ಭಿಣಿಯರಿಗೆ ಶೇ. 50ರಷ್ಟು ರಿಯಾಯತಿ ನೀಡಲಾಗಿದೆ. ಅದರಂತೆ ಒಂದು ಕಾಮಗಾರಿ ಕೆಲಸದಲ್ಲಿ ಮಹಿಳೆಯರ ಸಂಖ್ಯೆ ಶೇ. 60 ಕ್ಕಿಂತ ಹೆಚ್ಚಿದ್ದರೆ, ಅಲ್ಲಿಯ ಕೆಲಸದ ಪ್ರಮಾಣದಲ್ಲಿ ಶೇ. 10 ರಿಯಾಯತಿ ನೀಡಲಾಗುತ್ತಿದೆ. ಮಹಿಳಾ ಕಾರ್ವಿುಕರ ಮೂರು ವರ್ಷದೊಳಗಿನ ಮಕ್ಕಳ ಆರೈಕೆಗೆ ಕೂಸಿನ ಮನೆ ಕೇಂದ್ರ ಸ್ಥಾಪಿಸಲಾಗಿದೆ ಎಂದರು.

ಸಮಾನ ಕೂಲಿಯಾಗಿ 349 ರೂಪಾಯಿ ನೇರವಾಗಿ ಖಾತೆಗೆ ಜಮೆಯಾಗುತ್ತದೆ. ಮಹಿಳಾ ಸಬಲೀಕರಣಕ್ಕೆ ನರೇಗಾ ಯೋಜನೆ ಸಹಕಾರಿಯಾಗಿದೆ. ತಮ್ಮ ಕುಟುಂಬದ ಉತ್ತಮ ಭವಿಷ್ಯಕ್ಕಾಗಿ ಮಹಿಳೆಯರು ನರೇಗಾ ಕೆಲಸಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು ಎಂದರು.

ನರೇಗಾ ಯೋಜನೆಯಡಿ ಒಂದು ಜಾಬ್ ಕಾರ್ಡ್​ನಡಿ ಜೀವಿತಾವಧಿಯಲ್ಲಿ 5 ಲಕ್ಷ ರೂ. ಮೊತ್ತದ ವೈಯಕ್ತಿಕ ಕಾಮಗಾರಿ ಮಾಡಿಕೊಳ್ಳಬಹುದಾಗಿದೆ. ಸಣ್ಣ ಹಿಡುವಳಿ ಹೊಂದಿರುವ ರೈತರು, ಕಾರ್ವಿುಕರು ದನದ ಕೊಟ್ಟಿಗೆ, ಎರೆಹುಳು ತೊಟ್ಟಿ, ಕುರಿ ಶೆಡ್, ಕೃಷಿ ಹೊಂಡ, ಬದು ನಿರ್ವಣ, ಅಡಕೆ, ಪೇರಲ ಸೇರಿದಂತೆ ಅನೇಕ ಕಾಮಗಾರಿ ಮಾಡಿಕೊಳ್ಳಬಹುದು. ವೈಯಕ್ತಿಕ ಕಾಮಗಾರಿಗೂ ಎಲ್ಲರೂ ಆದ್ಯತೆ ನೀಡಬೇಕು ಎಂದರು.

ತಾಲೂಕು ಐಇಸಿ ಸಂಯೋಜಕ ಕುಮಾರಯ್ಯ ಚಿಕ್ಕಮಠ ಮಾತನಾಡಿ, ಸ್ತ್ರೀ ಚೇತನ ಅಭಿಯಾನದ ಮೂಲಕ ಮಹಿಳೆಯರಿಗೆ ನಿರಂತರ ಕೆಲಸ ನೀಡುವ ಉದ್ದೇಶ ಹೊಂದಲಾಗಿದೆ. ಬರುವ ಆರ್ಥಿಕ ವರ್ಷ ಏ. 1ರಿಂದ ಮತ್ತೆ ನೂರು ದಿನದ ಕೆಲಸ ನಿಮಗೆ ಸಿಗಲಿದೆ. ಆದ್ದರಿಂದ ಮಹಿಳೆಯರು ನರೇಗಾ ಕಾಮಗಾರಿಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಗ್ರಾಪಂ ಅಧ್ಯಕ್ಷೆ ಮಂಜುಳಾ ಹಾಲಿವಾಣದ, ಪಿಡಿಒ ಮನುಕುಮಾರ ಎಂ.ಬಿ., ಕ್ಲರ್ಕ್ ಕಂ ಆಪರೇಟರ್ ಪ್ರಭು ಕೆಂಚಾಯಿಕೊಪ್ಪ, ಬಿಎಫ್​ಟಿ ಕರಬಸಪ್ಪ, ಎಂಬಿಕೆ ಭಾರತಿ, ಕಾಯಕ ಬಂಧು ಬಸವಣೆಮ್ಮ ಚಲವಾದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net