

ಮಂಡ್ಯ: ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ತಮ್ಮ ಕ್ಷೇತ್ರದಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸಬೇಕೆಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ತಿಳಿಸಿದರು.
ನಗರದ ಜಿಪಂ ಕಚೇರಿಯ ಮಿನಿ ಸಭಾಂಗಣದಲ್ಲಿ ನರೇಗಾ ನೌಕರರ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದ ಅವರು, ನರೇಗಾ ಯೋಜನೆ ಸಿಬ್ಬಂದಿ ಗ್ರಾಮೀಣ ಭಾಗದಲ್ಲಿರುವ ಕೂಲಿಕಾರರಿಗೆ ಮಾನವ ದಿನ ಸೃಜನೆ ಸಂಬಂಧಿಸಿದ ಕಾಮಗಾರಿಗಳನ್ನು ಅಭಿವೃದ್ಧಿ ಮಾಡಲು ಕಾಲ ಕಾಲಕ್ಕೆ ಕ್ರಮವಹಿಸಬೇಕು. ಪ್ರತಿ ಗ್ರಾಮ ಪಂಚಾಯತಿಯಲ್ಲಿ ಸಕ್ರಿಯವಾಗಿ ಕೂಲಿಕಾರರು ಕೆಲಸದಲ್ಲಿ ತೊಡಗಿರುವಂತೆ ಉದ್ಯೋಗ ನೀಡಬೇಕು. ಕಳೆದ ವರ್ಷದಲ್ಲಿ ಬಾಕಿ ಇರುವ ಕಾಮಗಾರಿ ಮುಕ್ತಾಯಗೊಳಿಸಲು ಕ್ರಮವಹಿಸಬೇಕು. ಜಿಲ್ಲೆಗೆ ನಿಗದಿಪಡಿಸಿರುವ ಮಾನವ ದಿನಗಳ ಪ್ರಗತಿ ಸಾಧಿಸುವತ್ತ ಪ್ರತಿಯೊಬ್ಬರು ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.
ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳ ಕುರಿತು ಜನರಿಗೆ ಅರಿವು ಮೂಡಿಸುವುದರ ಜತೆಗೆ ಕಾಮಗಾರಿಗಳು ನಿಯಮಾನುಸಾರ ಅನುಷ್ಠಾನಗೊಳ್ಳುವಂತೆ ಕ್ರಮ ವಹಿಸಬೇಕು. ನರೇಗಾ ಯೋಜನೆ ಕುರಿತು ಸಾರ್ವಜನಿಕರಿಗೆ ಯಾವುದೇ ಸಮಸ್ಯೆಗಳು ಕಂಡುಬಂದರೂ ಸಿಬ್ಬಂದಿ ಸರಿಯಾದ ರೀತಿಯಲ್ಲಿ ಸ್ಪಂದಿಸಿ ಬಗೆಹರಿಸುವತ್ತ ಗಮನ ಹರಿಸಬೇಕು ಎಂದು ತಿಳಿಸಿದರು.
ಗ್ರಾಪಂನಲ್ಲಿ ನರೇಗಾ ಯೋಜನೆ ಕಾಮಗಾರಿ ಕಡತ ಮತ್ತು 7 ನಮೂನೆಯನ್ನು ಕಾಲಕಾಲಕ್ಕೆ ನಿರ್ವಹಿಸಬೇಕು. ಆದ್ಯತೆ ಮೇರೆಗೆ ವೈಯಕ್ತಿಕ ಕಾಮಗಾರಿಗಳ ಸಾಮಗ್ರಿ ವೆಚ್ಚ ಭರಿಸಿ ಕೆಲಸ ಮುಕ್ತಾಯಗೊಳಿಸಲು ಅಗತ್ಯ ಕ್ರಮವಹಿಸಬೇಕು. ಸಿಬ್ಬಂದಿ ನಿಷ್ಠೆ ಹಾಗೂ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿ. ಜಿಲ್ಲೆ ಉತ್ತಮ ಪ್ರಗತಿ ಸಾಧಿಸಲು ಶ್ರಮಿಸಬೇಕು ಹಾಗೂ ಪ್ರತಿ ದಿನ ತಮ್ಮ ಕಾರ್ಯಕ್ಷೇತ್ರದಲ್ಲಿ ನಿರತವಾಗಿರಬೇಕು. ಗ್ರಾಪಂ ಭೇಟಿ ವೇಳೆ ಜಿಪಿಎಸ್ ಛಾಯಾಚಿತ್ರ ಸಹಿತ ವರದಿ ನೀಡಬೇಕು. ಹಾಜರಾತಿಯನ್ನು ಪ್ರತಿ ತಿಂಗಳ ಮೂರನೆಯ ತಾರೀಖಿನ ಒಳಗಾಗಿ ಜಿಪಂಗೆ ಸಲ್ಲಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ(ಅಭಿವೃದ್ಧಿ) ಟಿ.ಲಕ್ಷ್ಮೀ, ಸಹಾಯಕ ಕಾರ್ಯದರ್ಶಿ(ಅಭಿವೃದ್ಧಿ) ಚಂದ್ರ ಇತರರಿದ್ದರು.