ಅರ್ಥಿಕ ಸ್ವಾವಲಂಬನೆಗೆ ನರೇಗಾ ನೆರವು

3sri-1 (2)
Published on

ಶೃಂಗೇರಿ: ನಾನಾ ರೋಗಗಳಿಗೆ ತುತ್ತಾಗಿ ವಾಣಿಜ್ಯಬೆಳೆ ಅಡಕೆ ತನ್ನ ಅಸ್ತಿತ್ವ ಕಳೆದು ಕೊಳ್ಳುತ್ತಿದ್ದು, ಅರ್ಥಿಕ ಸ್ವಾವಲಂಬನೆಗಾಗಿ ತಾಲೂಕಿನ ಯುವಕರು ನಗರದ ಕಡೆ ವಲಸೆ ಹೋಗುತ್ತಿದ್ದಾರೆ. ಆದರೆ ಇಲ್ಲಿಯೇ ಉದ್ಯಮದ ಹಾದಿ ಕಂಡುಕೊಂಡು ಜೀವನ ನಿರ್ವಹಣೆ ಮಾಡಬಹುದು ಎಂಬ ಉದ್ದೇಶದಿಂದ ನರೇಗಾ ಯೋಜನೆಯಡಿ ಹಲವಾರು ಯೋಜನೆಗಳು ಲಭ್ಯವಿದೆ.

ದನದ ಕೊಟ್ಟಿಗೆ, ಕೋಳಿಶೆಡ್ ನಿರ್ಮಾಣ, ಅಡಕೆ ಕೃಷಿಗೆ ಉತ್ತೇಜನ ನೀಡುವಲ್ಲಿ ತಾಲೂಕು ಪಂಚಾಯಿತಿಯ ಕಾರ್ಯವೈಖ್ಯರಿ ನಿಜಕ್ಕೂ ಪ್ರಶಂಸನೀಯ. ಕೃಷಿ ಭೂಮಿ ಇದ್ದವರೇ ಕೋಳಿಶೆಡ್ ನಿರ್ಮಿಸಬೇಕು ಎಂಬ ನಿಯಮವಿಲ್ಲ. ಭೂಮಿ ಇಲ್ಲದವರೂ ಕೋಳಿ ಸಾಕಾಣಿಕೆ ಮೂಲಕ ಅರ್ಥಿಕ ಸ್ವಾವಲಂಬನೆ ಪಡೆಯಬಹುದು. ನರೇಗಾ ಉದ್ಯೋಗ ಖಾತ್ರಿ ಯೋಜನೆಯಡಿ ಈ ಸೌಲಭ್ಯ ಪಡೆಯಬಹುದು.

ಕಡಿಮೆ ಖರ್ಚಿನಲ್ಲಿ ಲಾಭದಾಯಕವಾದ ಕೋಳಿ ಸಾಕಣಿಕೆ ಮಾಡಿ ಪ್ರತಿದಿನ ನಿವ್ವಳ ಲಾಭಗಳಿಸಬಹುದು ಎಂಬ ಉದ್ದೇಶದಿಂದ ನರೇಗಾ ಯೋಜನೆ ಮೂಲಕ ಕೋಳಿ ಶೆಡ್ ನಿರ್ಮಾಣಕ್ಕೆ 60 ಸಾವಿರ ರೂ.ಅರ್ಥಿಕ ಸಹಕಾರ ಸಿಗಲಿದೆ. ವಿದ್ಯಾರಣ್ಯಪುರ ಗ್ರಾಪಂ ವ್ಯಾಪ್ತಿಯಲ್ಲಿ ಹಲವರು ಅರ್ಜಿ ಸಲ್ಲಿಸಿ ಕೋಳಿ ಘಟಕ ನಿರ್ಮಿಸಿ ಉತ್ತಮ ಆದಾಯ ಗಳಿಸಿ ಯುವಕರಿಗೆ ಮಾದರಿಯಾಗಿದ್ದಾರೆ.

ವಿದ್ಯಾರಣ್ಯಪುರ ಗ್ರಾಪಂ ವ್ಯಾಪ್ತಿಯ ನಾಗೇಂದ್ರ ಮನೆ ಸಮೀಪ ಒಂದು ಚಿಕ್ಕಗೂಡು ನಿರ್ಮಿಸಿ ದೊಡ್ಡ ಹಾಗೂ ಸಣ್ಣ ಕೋಳಿ ಮರಿಗಳನ್ನು ಸಾಕುತ್ತಿದ್ದು ಅವುಗಳನ್ನು ಒಂದೇ ಗೂಡಿನಲ್ಲಿ ಹಾಕುವುದು ಕಷ್ಟಕರವಾಗಿತ್ತು. 2024-25ನೇ ಸಾಲಿನಲ್ಲಿ ನರೇಗಾ ಯೋಜನೆಯಡಿ ಅರ್ಥಿಕ ನೆರವು ಪಡೆದು 60 ರೂ. ವೆಚ್ಚದಲ್ಲಿ ಕೋಳಿ ಶೆಡ್ ನಿರ್ಮಿಸಿದ್ದಾರೆ.

ಮನೆ ಹಿಂಭಾಗದಲ್ಲಿ ಮೂರು ಹಂತದಲ್ಲಿ ಕೋಳಿಗೂಡು ನಿರ್ಮಾಣಗೊಂಡಿದೆ. ಪ್ರತಿಯೊಂದು ಗೂಡಿಗೂ ಕಬ್ಬಿಣದ ಮೆಸ್ ಬಾಗಿಲುಗಳಿವೆ. ಫೈಟರ್, ಟರ್ಕಿ, ಗಿನ್ನು, ಖಡಕ್ನಾಥ್ ಹಾಗೂ 45 ನಾಟಿಕೊಳಿಗಳ ಜತೆಗೆ 15 ಕ್ಕೂ ಹೆಚ್ಚು ಕೋಳಿ ಮರಿಗಳಿವೆ. ಖಡಕ್ನಾಥ್ ಕೋಳಿಗಳ ಮೊಟ್ಟೆ ಔಷಧಿಗೆ ಹೆಚ್ಚು ಬಳಕೆಯಾಗುತ್ತಿದೆ. ಇದಕ್ಕೆ ಹೆಚ್ಚು ಬೇಡಿಕೆಯೂ ಇದೆ. ಕೋಳಿಶೆಡ್ ನಿರ್ಮಾಣಕ್ಕೆ ಒಟ್ಟು 80 ಸಾವಿರ ರೂ. ಖರ್ಚಾಗಿದೆ. ಕೇವಲ ಹವ್ಯಾಸಕ್ಕಾಗಿ ಉದ್ಯಮ ಪ್ರಾರಂಭಿಸಿದ ದಂಪತಿಗಳು ಇದೀಗ ನರೇಗಾ ಯೋಜನೆಯಡಿ ಶೆಡ್ ನಿರ್ಮಿಸಿ ದಿನಕ್ಕೆ ಮೊಟ್ಟೆ ಹಾಗೂ ಕೋಳಿ ಮಾರಾಟದಿಂದ ಒಂದು ಸಾವಿರಕ್ಕೂ ಹೆಚ್ಚುಗಳಿಕೆ ಮಾಡುತ್ತಾ ಅರ್ಥಿಕವಾಗಿ ಸ್ವಾವಲಂಬನೆ ಸಾಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net