

ದೇವದುರ್ಗ: ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿಕಾರ್ಮಿಕರಿಗೆ ಕೆಲಸ ನೀಡಿದ್ದ ಸಂದರ್ಭದಲ್ಲಿ ಎನ್‌ಎಂಎಂಎಸ್ ಆ್ಯಪ್‌ನಲ್ಲೇ ಹಾಜರಾತಿ ಹಾಕಬೇಕು ಎಂದು ಪಿಡಿಒಗಳಿಗೆ ಜಿಪಂ ಯೋಜನಾ ನಿರ್ದೇಶಕ ಶರಣಬಸವರಾಜ ಕೆಸರಟ್ಟಿ ಸೂಚಿಸಿದರು.
ಪಟ್ಟಣದ ತಾಪಂ ಕಚೇರಿಯಲ್ಲಿ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗುರುವಾರ ಮಾತನಾಡಿದರು. ಖಾತ್ರಿ ಯೋಜನೆಯಡಿ ಕೂಲಿಕಾರರ ಹಾಜರಾತಿ ಕಡ್ಡಾಯವಾಗಿ ಹಾಕಬೇಕು. ಅರ್ಜಿ ಸಲ್ಲಿಸಿದ ಎಲ್ಲ ಕೂಲಿಕಾರರಿಗೆ ಕೆಲಸ ನೀಡಬೇಕು. ಪ್ರತಿ ಕಾಮಗಾರಿಗೂ ಅಗತ್ಯ ದಾಖಲೆ ಇರಿಸಬೇಕು. ಕಾಲಕಾಲಕ್ಕೆ ಸಮರ್ಪಕವಾಗಿ ಕರವಸೂಲಿ ಮಾಡಬೇಕು. ಕುಡಿವ ನೀರಿನ ವಿಷಯ ಗಂಭೀರವಾಗಿ ಪರಿಗಣಿಸಬೇಕು. ಮಳೆಗಾಲದಲ್ಲಿ ಶುದ್ಧ ಕುಡಿವ ನೀರು ಸರಬರಾಜುಗೆ ಹೆಚ್ಚಿನ ಗಮನ ಕೊಡಬೇಕು.
ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಸಮರ್ಪಕ ಕಸ ವಿಲೇವಾರಿ, ಚರಂಡಿ ಹೂಳು ತೆರವು, ಸೊಳ್ಳೆಗಳ ನಿಯಂತ್ರಣಕ್ಕೆ ಆದ್ಯತೆ ನೀಡಬೇಕು. ತಾಲೂಕಿನ 17ಗ್ರಾಪಂಗಳಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಸಮರ್ಪಕವಾಗಿ ಕಸ ಸಂಗ್ರಹ ಮಾಡಿ ವಿಭಜಿಸಲು ಸೂಚಿಸಬೇಕು. ಕಸ ಸಂಗ್ರಹ ವಾಹನದ ವಿಮೆ ಮಾಡಿಸಬೇಕು.
ಕೇಂದ್ರ ಸ್ಥಾನದಲ್ಲಿದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು. ದೂರುಬಂದರೆ ಗಂಭೀರವಾಗಿ ಪರಿಗಣಿಸಿ ಪರಿಹರಿಸುವ ಕೆಲಸ ಮಾಡಬೇಕು ಎಂದು ಸೂಚಿಸಿದರು.
ತಾಪಂ ಇಒ ಬಸವರಾಜ ಹಟ್ಟಿ, ಸಹಾಯಕ ನಿರ್ದೇಶಕ ಅಣ್ಣರಾವ್, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಮಹೇಶ್ವರ, ಪಿಡಿಒಗಳಾದ ಚನ್ನಬಸವ, ಮೊಹಿನುದ್ದೀನ್, ನರಸಪ್ಪ, ಹನುಮಂತಪ್ಪ, ವೆಂಕಟೇಶ ಇತರರಿದ್ದರು.