

ರಾಯಚೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ನಾರಾಯಣಪುರ ಬಲದಂಡೆ ಕಾಲುವೆ ಆಧುನೀಕರಣ ಕಾಮಗಾರಿಯಲ್ಲಿನ ನಡೆದಿರುವ ತಪ್ಪುಗಳ ಕುರಿತು ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸಲಾಗುವುದು ಎಂದು ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜು ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದರು. ಎನ್‌ಆರ್‌ಬಿಸಿ ಆಧುನೀಕರಣದ ಹೆಸರಿನಲ್ಲಿ ಸಾಕಷ್ಟು ಅನುದಾನ ದುರುಪಯೋಗವಾಗಿದ್ದು, ಬಿಜೆಪಿ ಸರ್ಕಾರ ಅದನ್ನು ಮುಚ್ಚಿ ಹಾಕಲು ಯತ್ನಿಸಿತ್ತು ಎಂದು ದೂರಿದರು. ತುಂಗಭದ್ರಾ ಎಡದಂಡೆ ಕಾಲುವೆ ಕೊನೆಯ ಭಾಗದಲ್ಲಿ ಎದುರಾಗುವ ನೀರಿನ ಸಮಸ್ಯೆ ನಿವಾರಣೆ, ಏಮ್ಸ್ ಮಂಜೂರು, ಕೈಗಾರಿಕೆಗಳ ಸ್ಥಾಪನೆಗೆ ಪ್ರಯತ್ನಿಸಲಾಗುವುದು. ನವಲಿ ಹತ್ತಿರ ಸಮತೋಲನ ಜಲಾಶಯ ನಿರ್ಮಾಣಕ್ಕೆ ಸರ್ಕಾರದ ಮೇಲೆ ಒತ್ತಡ ತರಲಾಗುವುದು ಎಂದರು.
ಜಿಲ್ಲೆಯಲ್ಲಿ ಜನರು ನಾಲ್ಕು ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲಿಸಿದ್ದಾರೆ. ಬಿಜೆಪಿಯವರು ಡಬಲ್ ಇಂಜಿನ್ ಸರ್ಕಾರ ಇದ್ದರೆ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರೆ ಹೊರತು ಇದುವರೆಗೂ ಅವರು ಮಾಡಿರುವ ಅಭಿವೃದ್ಧಿ ಏನು ಎಂದು ಹೇಳಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವರ ದಂಡು ರಾಜ್ಯದಲ್ಲಿ ಬೀಡು ಬಿಟ್ಟಿದ್ದರೂ ಜನರು ಚಾಣಾಕ್ಷತನದಿಂದ ಮತ ಚಲಾಯಿಸಿದ್ದಾರೆ. ಮೋದಿ ಪ್ರಚಾರ ನಡೆಸಿದ ಜಿಲ್ಲೆಗಳನ್ನು ಬಿಜೆಪಿ ಮುಕ್ತ ಮಾಡಿದ್ದಾರೆ. ಈ ಚುನಾವಣೆ ಮುಂಬರುವ ಲೋಕಸಭೆ ಚುನಾವಣೆಗೆ ದಿಕ್ಸೂಚಿಯಾಗಲಿದೆ.
ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಕಡಿಮೆ ಅಂತರದಲ್ಲಿ ಪರಾಭವಗೊಂಡಿದ್ದಾರೆ. ದೇವದುರ್ಗದಲ್ಲಿ ಕಾರ್ಯಕರ್ತರ ಪಡೆಯಿದೆ. ಆದರೆ, ನಾಯಕರು ಸರಿಯಾಗಿ ನಡೆದುಕೊಳ್ಳದ ಕಾರಣ ಹಿನ್ನಡೆಯಾಗಿದ್ದು, ಶೀಘ್ರದಲ್ಲಿ ಅದನ್ನು ಸರಿಪಡಿಸಲಾಗುವುದು ಎಂದು ಎನ್.ಎಸ್.ಬೋಸರಾಜು ಹೇಳಿದರು.