

ಎನ್.ಆರ್.ಪುರ: ಮೀಸಲು ಅರಣ್ಯ ರಚಿಸಲು ಅರಣ್ಯಕಾಯ್ದೆ 1963ರ ಕಲಂ 4(1) ಅಧಿಸೂಚನೆ ಹೊರಡಿಸಿರುವ ಬಗ್ಗೆ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಅಥವಾ ಅದರ ವ್ಯಾಪ್ತಿಯಲ್ಲಿ ಸ್ಥಿರಾಸ್ತಿ ಹೊಂದಿರುವವರಿಂದ ಕಡೂರಿನ ಅರಣ್ಯ ವ್ಯವಸ್ಥಾಪನಾಧಿಕಾರಿ ರಾಮಕೃಷ್ಣರಾವ್ ವಲಯ ಅರಣ್ಯ ಇಲಾಖೆ ಅಧಿಕಾರಿ ಕಚೇರಿಗೆ ಶುಕ್ರವಾರ ಭೇಟಿ ನೀಡಿ ಗ್ರಾಮಸ್ಥರಿಂದ ಆಕ್ಷೇಪಣೆ ಸ್ವೀಕರಿಸಿದರು.
ನಂತರ ಮಾತನಾಡಿದ ಅವರು, ಎನ್.ಆರ್.ಪುರ ಬ್ಲಾಕ್ ವ್ಯಾಪ್ತಿಯಲ್ಲಿ ಮೀಸಲು ಅರಣ್ಯ 4(1)ಗೆ ಸಂಬಂಧಿಸಿದಂತೆ ಆಕ್ಷೇಪಣೆ ಸ್ವೀಕರಿಸಲಾಗುತ್ತಿದೆ. ಎಲ್ಲ ಗ್ರಾಮಸ್ಥರಿಂದ ಆಕ್ಷೇಪಣಾ ಅರ್ಜಿ ಸ್ವೀಕರಿಸಿದ ನಂತರ ಅರ್ಜಿ ಸಲ್ಲಿಸಿದವರಿಗೆ ನೋಟಿಸ್ ನೀಡಲಾಗುವುದು. ಆಗ ನಿಗದಿತ ದಿನಾಂಕದೊಳಗೆ ಭೂ ಮಂಜೂರಾತಿಗೆ ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸಬೇಕು. ದಾಖಲೆಗಳು ಕ್ರಮಬದ್ಧವಾಗಿದ್ದಲ್ಲಿ ಈ ಪ್ರದೇಶವನ್ನು ಬಿಟ್ಟು ಅಂತಿಮ ಅಧಿಸೂಚನೆ ಹೊರಡಿಸಲಾಗುವುದು ಎಂದರು.
ಆಕ್ಷೇಪಣೆ ಸಲ್ಲಿಸಲು ಸಾಧ್ಯವಾಗದವರು ಮುಂದಿನ ಭೇಟಿ ಸಂದರ್ಭದಲ್ಲಿ ಅಥವಾ ಕಡೂರಿನ ಅರಣ್ಯ ವ್ಯವಸ್ಥಾಪನಾ ಅಧಿಕಾರಿ ಕಚೇರಿ ಅಥವಾ ವಲಯ ಅರಣ್ಯ ಅಧಿಕಾರಿಗಳ ಕಚೇರಿಗೆ ಆಕ್ಷೇಪಣೆ ಅರ್ಜಿ ಸಲ್ಲಿಸಬಹುದು. ಎನ್.ಆರ್.ಪುರ ಮತ್ತು ಚಿಕ್ಕಗ್ರಹಾರ ವಲಯ ಅರಣ್ಯ ವ್ಯಾಪ್ತಿಯಲ್ಲಿ 4(1)ಗೆ ಸಂಬಂಧಿಸಿದಂತೆ 600 ಆಕ್ಷೇಪಣಾ ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ತಿಳಿಸಿದರು.