

ಗದಗ: ನೂತನ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ ಜಾರಿ ಮತ್ತು ನೂತನ ಶಿಕ್ಷಣ ನೀತಿಯಲ್ಲಿನ ದೋಷಗಳನ್ನು ಕೈಬಿಡಬೇಕು ಎಂದು ಅಖಿಲ ಭಾರತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯಾದ್ಯಕ್ಷ ಬಸವರಾಜ ಗುರಿಕಾರ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಶಿಕ್ಷಕರ ಸಮಸ್ಯೆಗಳ ಕುರಿತು ಸರ್ಕಾರ ಆಲಿಸಬೇಕು. ಸರ್ಕಾರಿ ಶಾಲೆಗಳಿಗೆ ಅತಿಥಿ ಶಿಕ್ಷಕರ ಬದಲಾಗಿ ಖಾಯಂ ಶಿಕ್ಷಕರನ್ನು ಸರ್ಕಾರ ನೇಮಕ ಮಾಡಿಕೊಳ್ಳಬೇಕು. ಏಕ ರೂಪದ ವೇತನ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ನೌಕರ ವಂತಿಗೆಯನ್ನು ಕೇಂದ್ರ ಸರ್ಕಾರ ಎನ್ ಎಸ್ ಡಿ ಎಲ್ ನಲ್ಲಿ ಸಂಗ್ರಹಿಸಿದೆ. ಈ ಹಣವನ್ನು ಕೇಂದ್ರ ಸರ್ಕಾರ ಪಾವತಿಸುತ್ತಿಲ್ಲ. ಮರು ಪಾವತಿಸಲು ಮನವಿ ಮಾಡಲಾಗಿತ್ತು. ಪಿಂಚಣಿ ಭದ್ರತಾ ಕಾಯ್ದೆ ತಿದ್ದುಪಡಿ ಅಗತ್ಯವಿದ್ದು, ಕಾಯ್ದೆ ತಿದ್ದುಪಡಿ ನಂತರ ವಂತಿಗೆ ಹಣ ಪಾವತಿಸಲಾಗುವುದು ಎಂದು ಸಚಿವೆ ನಿರ್ಮಲಾ ಸಿತಾರಾಮನ್ ತಿಳಿಸಿದ್ದಾರೆ. ಆದಷ್ಟು ಬೇಗ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಎಂದರು.
ಈ ಎಲ್ಲ ಬೇಡಿಕೆಗಳಿಗಾಗಿ ಆಗ್ರಹಿಸಿ ಸೆ.5 ರಿಂದ ಅ.5 ರವರೆಗೆ ಭಾರತ ಯಾತ್ರೆ ದೇಶಾದ್ಯಂತ ನಡೆಯುತ್ತಿದೆ. ಅ.5 ರಂದು ದಿಲ್ಲಿಯಲ್ಲಿ ಸಭೆ ನಡೆಸಿ ಮುಂದಿನ ಹೋರಾಟ ರೂಪುರೇಷೆ ಪ್ರಕಟಿಸಲಾಗುವುದು ಎಂದರು.
ರವಿ ಗುಂಜೀಕರ್, ಚಂದ್ರಶೇಖರ ನುಗ್ಗಲಿ, ಕೆ. ನಾಗೇಶ ಹಲವರು ಇದ್ದರು