ಬಿಡಿಎ ಅಧಿಕಾರಿಗಳ ಹೇಳಿಕೆಗೆ ಎನ್‌ಪಿಕೆಎಲ್ ಮುಕ್ತ ವೇದಿಕೆ ಆಕ್ಷೇಪ

npkl letter
Published on

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ 20/30 ಅಡಿ ವಿಸ್ತೀರ್ಣದ ಸೈಟ್‌ದಾರರ ಅಪಪ್ರಚಾರದಿಂದ ಸಂಸ್ಥೆಗೆ ಕೆಟ್ಟ ಹೆಸರು ಬರುವಂತಾಗಿದೆ ಎಂಬ ಬಿಡಿಎ ಹಿರಿಯ ಅಧಿಕಾರಿಗಳ ಹೇಳಿಕೆಗೆ ಎನ್‌ಪಿಕೆಎಲ್ ಮುಕ್ತ ವೇದಿಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ವಿಧಾನಮಂಡಲದ ಅರ್ಜಿ ಸಮಿತಿ ಸಭೆಯಲ್ಲಿ ಅನವಶ್ಯಕವಾಗಿ ಸೈಟ್‌ದಾರರ ವಿರುದ್ಧ ಆಯುಕ್ತರು ಹಾಗೂ ಹಿರಿಯ ಅಧಿಕಾರಿಗಳು ಆಕ್ಷೇಪಾರ್ಹ ಮಾತುಗಳನ್ನು ಆಡಿದ್ದಾರೆ. ಸಂಸ್ಥೆಯ ತಪ್ಪು ಮುಚ್ಚಿಕೊಳ್ಳಲು ಬಡ ನಿವೇಶನದಾರರ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಅಧಿಕಾರಿ ವರ್ಗ ಮಾಡಿದೆ ಎಂದು ವೇದಿಕೆಯ ಅಧ್ಯಕ್ಷ ಚನ್ನಬಸವರಾಜ ಅವರು ಸಿಎಂಗೆ ಪತ್ರ ಬರೆದು ತಮ್ಮ ಆಕ್ಷೇಪವನ್ನು ಸಲ್ಲಿಸಿದ್ದಾರೆ.

ಸಮಾಜದ ಬಡ ವರ್ಗಕ್ಕೆ ಕಡಿಮೆ ವಿಸ್ತೀರ್ಣದ ಹಾಗೂ ಕಡಿಮೆ ಮೊತ್ತದಲ್ಲಿ ಸೈಟ್ ನೀಡುವುದು ಸರ್ಕಾರಿ ಸಂಸ್ಥೆಗಳ ಕರ್ತವ್ಯ. ಆದರೆ, ಬಿಡಿಎ ಅಧಿಕಾರಿಗಳು ಬಡವರನ್ನು ಅವಮಾನಿಸುವ ರೀತಿ ಹೇಳಿಕೆ ನೀಡುತ್ತಿರುವುದನ್ನು ಸಹಿಸುವುದಿಲ್ಲ. ಕಾಲಮಿತಿಯೊಳಗೆ ಬಡಾವಣೆಯಲ್ಲಿನ ಮೂಲಸೌಕರ್ಯ ಕಾಮಗಾರಿಗಳನ್ನು ಪೂರ್ಣಗೊಳಿಸದೆ ವೃಥಾ ಜನರ ಮೇಲೆ ಆರೋಪ ಹೊರಿಸುತ್ತಿರುವುದು ಅಧಿಕಾರಿಗಳ ಹುದ್ದೆಗೆ ತಕ್ಕುದಲ್ಲ. ಸಾರ್ವಜನಿಕರ ವಿಚಾರದಲ್ಲಿ ಅಧಿಕಾರಿ ವರ್ಗದವರು ತಮ್ಮ ನಿಲುವು ಬದಲಿಸಿಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net