ಮಕ್ಕಿ ಶ್ರೀ ಶಾಸ್ತಾವು ದೇವರ ವಾರ್ಷಿಕ ಉತ್ಸವ ಸಂಪನ್ನ

4.npk ..4
Published on

 ನಾಪೋಕ್ಲು : ಸಮೀಪದ ಬೇತು ಗ್ರಾಮದ ಮಕ್ಕಿ ಶ್ರೀ ಶಾಸ್ತಾವು ದೇವರ ವಾರ್ಷಿಕ ಎಡಮ್ಯಾರು ಉತ್ಸವ ಎರಡು ದಿನಗಳ ಕಾಲ ವಿಜೃಂಭಣೆಯಿಂದ ನೆರವೇರಿತು. ಭಾನುವಾರ ದೇವಾಲಯದ ಆವರಣದಲ್ಲಿ ನಡೆದ ಎರಡು ಪ್ರಮುಖ ಕೋಲಗಳೊಂದಿಗೆ ಉತ್ಸವ ಸಂಪನ್ನಗೊಂಡಿತು. ಮಕ್ಕಿ ಶಾಸ್ತಾವು ಸನ್ನಿಧಿಯಲ್ಲಿ ಶುಕ್ರವಾರ ಬೆಳಗಿನಿಂದಲೇ ವಿವಿಧ ಕೋಲಗಳು ಶಾಸ್ತಾವು ದೇವರಿಗೆ ಸೇವೆ ಸಲ್ಲಿಸಿದವು. ಬೆಳಿಗ್ಗೆ ಅಜ್ಜಪ್ಪ ಕೋಲ ಹಾಗೂ ಮಧ್ಯಾಹ್ನ ವಿಷ್ಣುಮೂರ್ತಿ ಕೋಲ ಮೇಲೇರಿ (ಕೆಂಡಸೇವೆ) ಗಳು ಸಾಂಪ್ರದಾಯಿಕ ವೇಷಭೂಷಣಗಳೊಂದಿಗೆ ಗಮನ ಸೆಳೆದವು. ಈ ಸಂದರ್ಭ ನೂರಾರು ಭಕ್ತರು ಉತ್ಸವದಲ್ಲಿ ಪಾಲ್ಗೊಂಡು ದೇವರಿಗೆ ವಿವಿಧ ರೀತಿಯ ಹರಕೆ, ಕಾಣಿಕೆ ಸಮರ್ಪಿಸಿ ಪ್ರಸಾದ ಸ್ವೀಕರಿಸಿ ಧನ್ಯತೆ ಮೆರೆದರು. ಚಂಡೆ ವಾದ್ಯದೊಂದಿಗೆ ದೀಪಾರಾಧನೆ: ಉತ್ಸವದ ಅಂಗವಾಗಿ ಶನಿವಾರ ಮಧ್ಯಾಹ್ನ ಎತ್ತೇರಾಟ ಹಾಗೂ ತಡರಾತ್ರಿಯವರೆಗೆ ದೇವಾಲಯದಲ್ಲಿ ಕೇರಳದ ಚಂಡೆ ವಾದ್ಯದೊಂದಿಗೆ ದೀಪಾರಾಧನೆ ನಡೆದಿದ್ದು ವಿಶೇಷವಾಗಿತ್ತು. ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿ ಪದಾಧಿಕಾರಿಗಳು, ತಕ್ಕ ಮುಖ್ಯಸ್ಥರು ಹಾಗೂ ಊರಿನ ಭಕ್ತರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net