

ನಾಪೋಕ್ಲು: ಹೋಬಳಿ ವ್ಯಾಪ್ತಿಯಲ್ಲಿ ಮಂಗಳವಾರ ಗಾಳಿ ಸಹಿತ ಬಿರುಸಿನಿಂದ ಮಳೆ ಸುರಿಯಿತು. ಅಲ್ಲಲ್ಲಿ ಮರಗಳು ಮುರಿದು ಬಿದ್ದ ಪರಿಣಾಮ ಮನೆಗಳಿಗೆ ಹಾನಿ ಸಂಭವಿಸಿದ್ದಲ್ಲದೆ ಹೋಬಳಿ ವ್ಯಾಪ್ತಿಯ ಹಲವೆಡೆ ವಿದ್ಯುತ್ ಕಡಿತಗೊಂಡಿದೆ. ಇಲ್ಲಿಗೆ ಸಮೀಪದ ಎಮ್ಮೆಮಾಡು ಗ್ರಾಮದ ನಬೀಶ ಅವರ ವಾಸದ ಮನೆಗೆ ರಾತ್ರಿ ಭಾರಿ ಗಾತ್ರದ ಮರ ಬಿದ್ದು ಹಾನಿ ಸಂಭವಿಸಿದೆ. ಸೋಮವಾರ ರಾತ್ರಿ ಬಿದ್ದ ಮರದಿಂದಾಗಿ ಮನೆಯ ಚಾವಣಿಗೆ ಅಳವಡಿಸಿದ 5 ಸಿಮೆಂಟ್ ಶೀಟ್ ಹುಡಿಯಾಗಿರುವುದಲ್ಲದೆ ಗೋಡೆ ಬಿರುಕು ಬಿಟ್ಟು ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ಪರಿವೀಕ್ಷಕ ರವಿಕುಮಾರ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಕಕ್ಕಬೆ -ಕುಂಜಿಲ ಗ್ರಾಮದ ನಿವಾಸಿ ಕೆ.ಎಂ. ಮರಿಯಮ್ಮ ಅವರ ವಾಸದ ಮನೆ ಗೋಡೆ ಕುಸಿದು ಹಾನಿ ಸಂಭವಿಸಿದೆ. ಇಲ್ಲಿಗೆ ಸಮೀಪದ ಹೊದ್ದೂರು ಗ್ರಾಮ ಪಂಚಾಯತಿಯ ಕುಂಬಳಗಾಳು ಗ್ರಾಮದ ನಿವಾಸಿ ಕಲ್ಲೆಂಗಡ ಗಿರೀಶ್ ಎಂಬುವರ ತೋಟದ ಲೈನ್ ಮನೆಯ ಮೇಲೆ ಸೋಮವಾರ ರಾತ್ರಿ ಬಾರಿ ಗಾತ್ರದ ಮರ ಬಿದ್ದು ಹಾನಿ ಸಂಭವಿಸಿದೆ.