

ಬೆಂಗಳೂರು: ರಾಜಧಾನಿಯ ಚಾಮರಾಜಪೇಟೆಯಲ್ಲಿರುವ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಿಸುವ ಕುರಿತು ಸ್ಥಳೀಯರು ಸಲ್ಲಿಸಿರುವ ಮನವಿ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಹೈಕೋರ್ಟ್ ಮೌಖಿಕ ಸೂಚನೆ ನೀಡಿದೆ.
ಚಾಮರಾಜಪೇಟೆ ನಾಗರಿಕರ ಒಕ್ಕೂಟ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಹಾಗೂ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠವು ಬುಧವಾರ ಆಲಿಸಿದ ವೇಳೆ ಈ ಸೂಚನೆಯನ್ನು ನೀಡಲಾಯಿತು.
ನ್ಯಾಯಾಲಯದ ದಿನದ ಕಲಾಪ ಪ್ರಾರಂಭವಾಗುತ್ತಿದ್ದಂತೆ ನ್ಯಾಯಪೀಠದ ಮುಂದೆ ಒಕ್ಕೂಟದ ಪರ ವಕೀಲರು ಹಾಜಾರಾಗಿ, ಅರ್ಜಿಯನ್ನು ಬೇಗನೆ ವಿಚಾರಣೆಗೆ ಪರಿಗಣಿಸಬೇಕೆಂದು ಮನವಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಹಬ್ಬ ಮುಗಿದು ಎರಡು ದಿನ ಆಗಿದೆ. ವಿಳಂಬವಾಗಿ ಕೋರ್ಟ್‌ಗೆ ಏಕೆ ಬಂದಿರಿ? ಮುಂಚಿತವಾಗಿ ಬಂದಿದ್ದರೆ ಪರಿಹಾರ ಸೂಚಿಸಬಹುದಿತ್ತು ಎಂದು ಅಭಿಪ್ರಾಯಪಟ್ಟಿತು.
ಮತ್ತೆ ಮಾತು ಮುಂದುವರಿಸಿದ ವಕೀಲರು, ನಾವು ಸಾರ್ವಜನಿಕ ಗಣೇಶೋತ್ಸವವನ್ನು ಆಚರಿಸುತ್ತಿದ್ದೇವೆ. ಕನ್ನಡ ರಾಜ್ಯೋತ್ಸವ ನ.1ರಂದು ಇದ್ದರೂ, ತಿಂಗಳಿಡೀ ಆಚರಿಸಲಾಗುತ್ತದೆ. ಇದೇ ರೀತಿ ಒಕ್ಕೂಟದ ವತಿಯಿಂದ ಸೆ.22ರಿಂದ 24ರ ವರೆಗೆ ಈದ್ಗಾ ಮೈದಾನದಲ್ಲಿ ಉತ್ಸವ ಆಚರಿಸಲು ತೀರ್ಮಾನಿಸಲಾಗಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ನಿಮ್ಮ ನಿಲುವು ಸರಿ ಇದ್ದರೂ, ತಡವಾಗಿ ನ್ಯಾಯಾಲಯಕ್ಕೆ ಬಂದಿದ್ದೀರಿ. ಸಾರ್ವಜನಿಕ ಗಣೇಶೋತ್ಸವಕ್ಕೆ ಪ್ರತ್ಯೇಕ ದಿನ ಇರದೆ ಹಬ್ಬದಂದೇ ಆಚರಿಸುವುದು ಸಂಪ್ರದಾಯ ಎಂದು ನ್ಯಾಯಪೀಠವು ವಕೀಲರಿಗೆ ತಿಳಿಹೇಳಿತು.
ಉತ್ಸವ ಆಚರಿಸುವ ಕುರಿತು ಈಗಾಗಲೇ ಸಕ್ಷಮ ಪ್ರಾಧಿಕಾರವಾದ ನಗರ ಜಿಲ್ಲಾಧಿಕಾರಿಗೆ ಸೆ.13ರಂದೇ ಅರ್ಜಿ ಸಲ್ಲಿಸಿದ್ದರೂ, ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂಬುದನ್ನು ತಿಳಿಸಲಾಯಿತು. ಇದನ್ನಾಧರಿಸಿ ನಿಮ್ಮ ಮನವಿಯನ್ನು ಸರ್ಕಾರಿ ವಕೀಲರಿಗೆ ಹಸ್ತಾಂತರಿಸಿ ಅವರಿಂದ ನಗರ ಡಿಸಿಯೊಂದಿಗೆ ಚರ್ಚಿಸಿ ಕೈಗೊಂಡ ಕ್ರಮವನ್ನು ತಿಳಿಸಲಾಗುವುದು ಎಂಬುದಾಗಿ ನ್ಯಾಯಪೀಠವು ಅರ್ಜಿದಾರ ಪರ ವಕೀಲರಿಗೆ ಹೇಳಿತು.